

ಕಂಪ್ಲಿ: ರಾಷ್ಟ್ರೀಯ ಮಕ್ಕಳ ಆಯೋಗದ ನಿರ್ದೇಶನದಂತೆ ಮಕ್ಕಳ ರಕ್ಷಣೆ ಮತ್ತು ಪುನರ್ವಸತಿ ಆಂದೋಲನ ನಿಮಿತ್ತ ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ತಂಡವು ಪಟ್ಟಣದಲ್ಲಿ ಶುಕ್ರವಾರ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿತು.
ಇದಕ್ಕೂ ಮುನ್ನಾ ತಹಸಿಲ್ ಕಚೇರಿಯಲ್ಲಿ ತಪಾಸಣಾ ತಂಡದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತಹಸೀಲ್ದಾರ್ ಎಸ್.ಶಿವರಾಜ ಮಾತನಾಡಿ, ತಾಲೂಕಿನಲ್ಲಿ ಬಾಲ ಕಾರ್ಮಿಕ ವ್ಯವಸ್ಥೆ ಚಾಲ್ತಿಯಲ್ಲಿರದಂತೆ ಅಧಿಕಾರಿಗಳು ನಿಗಾವಹಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಎಲ್ಲ ಅಧಿಕಾರಿಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಎ.ಮೌನೇಶ ಮಾತನಾಡಿ, ಪಟ್ಟಣದ 20 ಅಂಗಡಿ, ಹೋಟೆಲ್, ಗ್ಯಾರೇಜ್, ಬಟ್ಟೆಶಾಪ್, ಸಾಮಿಲ್, ಬೇಕರಿಗಳಲ್ಲಿ ದಿಢೀರ್ ಭೇಟಿ ನೀಡಿ ತಪಾಸಿಸಿ ಸ್ಥಳದಲ್ಲಿಯೇ ಮೂವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಾಲಕಾರ್ಮಿಕರನ್ನು ಬಳಸಿಕೊಂಡ ಗ್ಲಾಸ್‌ಕಟಿಂಗ್ ವರ್ಕ್‌ಶಾಪ್, ಬೇಕರಿ ಮಾಲೀಕರಿಗೆ ನೊಟೀಸ್ ನೀಡಿದ್ದು, ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕ ನಿರೀಕ್ಷಕ ಶಿವಶಂಕರ್, ತಾಪಂ ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಶಿಕ್ಷಣ ಸಂಯೋಜಕ ಟಿ.ಎಂ.ಬಸವರಾಜ, ತಾಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಬಸವರಾಜ, ನಿಲಯಪಾಲಕ ಕೆ.ವಿರೂಪಾಕ್ಷಿ, ಮೇಲ್ವಿಚಾರಕಿ ಲತೀಫಾ ಬೇಗಂ, ಚೈಲ್ಡ್‌ಲೈನ್ ಸಂಯೋಜಕಿ ಚಂದ್ರಕಲಾ, ಎಎಒ ಜ್ಯೋತಿ, ಎಎಸ್‌ಐ ಬಸವರಾಜ ಇತರರಿದ್ದರು.