

ಕಂಪ್ಲಿ: ಕಳೆದ ಹನ್ನೆರಡು ದಿನಗಳಿಂದ 9ನೇ ವಾರ್ಡ್‌ನ ಗುಲ್ಬರ್ಗಾ ಓಣಿ, ಪುರಸಭೆ ನೀರು ಶುದ್ಧೀಕರಣ ಘಟಕ ಪ್ರದೇಶ ಬಳಿ ಉಪಟಳ ನೀಡುತ್ತಿದ್ದ ಕರಿ ಕೋತಿ ಬೋನಿಗೆ ಬಿದ್ದಿದೆ.
ಕರಿ ಕೋತಿ ಜನರಿಗೆ ಒದೆಯುವುದು, ಕಚ್ಚಲು ಮುಂದಾಗುವುದು, ಮನೆ ಹೊಕ್ಕು ದಾಂಧಲೆ ಮಾಡುವುದರಿಂದ ಬೇಸತ್ತ ಜನ ಪುರಸಭೆಗೆ ದೂರು ನೀಡಿದ್ದರು. ಗುಲ್ಬರ್ಗಾ ಓಣಿಯ ಚೌದ್ರಿ ಮನೆ ಬಳಿ ಮಂಗಳವಾರ ಬೋನು ಇರಿಸಿದ್ದರೂ ಕೋತಿ ಸೆರೆಯಾಗಿರಲಿಲ್ಲ.
ಓಣಿಯ ಯುವಕರಾದ ಹುಸೇನ್‌ಬಾಷಾ, ಆಟೋ ಹೈಮದ್, ಅನಿಲ್, ಶಫಿ ಸೇರಿ ಅನೇಕರು ಬೋನಿಗೆ ಹಣ್ಣು, ಬಿಸ್ಕತ್ತು, ಬ್ರೆಡ್ ಹಾಕಿ ಕೋತಿಯ ಗಮನಸೆಳೆದಿದ್ದರಿಂದ ಗುರುವಾರ ಸಂಜೆ ಸೆರೆಯಾಗಿದೆ. ಶುಕ್ರವಾರ ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಜಿಯೋಲಾಜಿಕಲ್ ಪಾರ್ಕ್ ಸಿಬ್ಬಂದಿ ಕಪ್ಪು ಕೋತಿಯನ್ನು ಬೋನಿನೊಂದಿಗೆ ಒಯ್ದಿದ್ದಾರೆ.