ವಾಲಗದ ಸದ್ದು ವಾನರಗೆ ಆಗಲ್ಲ!; ಮಂಗಲವಾದ್ಯ ಕಿವಿಗೆ ಬೀಳುತ್ತಿದ್ದಂತೆ ದಾಳಿ ಮಾಡುವ ಕಪ್ಪು ಕೋತಿ

04072022 Kampli Black monkey attck
Published on

ಸೆರೆ ಹಿಡಿಯಲು ಚಿಕ್ಕಜಾಯಿಗನೂರು ಗ್ರಾಮಸ್ಥರ ಒತ್ತಾಯ

ಕಂಪ್ಲಿ : ಈ ಊರಲ್ಲಿ ವಾಲಗ ಊದುವಂತಿಲ್ಲ. ತಪ್ಪಡಿ ಬಡಿಯುವಂತಿಲ್ಲ. ಬಾಜಾ ಭಜಂತ್ರಿ ಬಾರಿಸುವಂತಿಲ್ಲ. ಒಂದು ವೇಳೆ ವಾದ್ಯಗಳ ಸದ್ದು ಮಾಡಿದರೆ, ಕಪ್ಪು ಕೋತಿಯೊಂದು ಜನೆ ಮೇಲೆ ದಾಳಿ ಮಾಡಿಬಿಡುತ್ತದೆ..!

ಇದು ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಜಾಯಿಗನೂರು ಗ್ರಾಮದ ಕತೆ. ಯಾರಾದರೂ ತಪ್ಪಡಿ ಬಡಿದರೆ, ವಾಲಗ ಊದಿದರೆ, ಭಜಂತ್ರಿ ಬಾರಿಸಿದರೆ ಎಲ್ಲಿಂದಲೋ ಹಾರಿ ಬರುವ ಕಪ್ಪು ಕೋತಿ ಜನರ ಮೇಲೆ ದಾಳಿ ಮಾಡುತ್ತದೆ. ಹದಿನೈದು ದಿನಗಳಿಂದ ಈ ಸ್ಥಿತಿ ನಿರ್ಮಾಣವಾಗಿದ್ದು, ಮದುವೆ ಸೇರಿ ಯಾವುದೇ ಮಂಗಲ ಕಾರ್ಯಕ್ರಮಕ್ಕೂ ವಾಲಗ ಊದದ ಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದೆ.

ಈ ತನಕ ಕೇವಲ ಮೈಮೇಲೆ ಹಾರಿ ಹೆದರಿಸುತ್ತಿದ್ದ ಕಪ್ಪು ಕೋತಿ, ಭಾನುವಾರ ಗ್ರಾಮದ ಕೆಂಚಮ್ಮ ಗುಡಿ ಬಳಿ ದುರುಗಮ್ಮ ಎನ್ನುವವರ ಮೇಲೆ ದಾಳಿ ಮಾಡಿ, ತಲೆ ಮೇಲೆ ಗೀರಿ ಗಾಯಗೊಳಿಸಿದೆ. ಇದರಿಂದಾಗಿ ಗ್ರಾಮಸ್ಥರು ಗಾಭರಿಯಾಗಿದ್ದಾರೆ.

ಕರಿ ಕೋತಿಯ ಉಪಟಳದಿಂದಾಗಿ ಗ್ರಾಮದಲ್ಲಿ ಮಂಗಲವಾದ್ಯಗಳ ಸದ್ದು ನಿಂತಿದೆ. ವಾದ್ಯದ ಸಪ್ಪಳ ಕೇಳುತ್ತಿದ್ದಂತೆ ದಾಳಿ ಮಾಡುವ ಕಪ್ಪು ಕೋತಿಯನ್ನು ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರಾದ ಜೆ.ಕಾಟಂರಾಜು, ಬಿ.ಮಾರೆಪ್ಪ, ಬಿ.ವೆಂಕಟೇಶ್, ಡಿ.ಜಡೆಪ್ಪ, ಜಿ.ಪಂಪನಗೌಡ ಇತರರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net