

ಕಂಪ್ಲಿ: ಅಂಧ ಹಾಗೂ ಅನಾಥ ವಿಕಲಚೇತನರಲ್ಲಿ ಸ್ವಾವಲಂಬಿ ಜೀವನ ಸಾಧಿಸುವ ಆತ್ಮವಿಶ್ವಾಸ ತುಂಬುವಲ್ಲಿ ಲಿಂ.ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಪಾತ್ರ ದೊಡ್ಡದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಇಲ್ಲಿನ ಡಾ.ಪಂ.ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ಪಾಠಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಲಿಂ.ಹಾನಗಲ್ ಕುಮಾರಸ್ವಾಮಿಗಳ ಜಯಂತ್ಯುತ್ಸವ, ಪಂಡಿತ್ ಪಂಚಾಕ್ಷರ ಗವಾಯಿಗಳ 78ನೇ ಪುಣ್ಯ ಸ್ಮರಣೋತ್ಸವ ಹಾಗೂ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ 12ನೇ ಪುಣ್ಯಸ್ಮರಣೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಜೀವನೋಪಾಯಕ್ಕಾಗಿ ಸಂಗೀತ, ಪುರಾಣ ಪ್ರವಚನ ಕಲೆಯನ್ನು ಕರಗತ ಮಾಡಿಕೊಡುವ ಮೂಲಕ ಜೀವನೋತ್ಸಾಹ ಮೂಡಿಸುವಲ್ಲಿ ಇವರು ಅಗ್ರಗಣ್ಯರಾಗಿದ್ದರು. ಸಂಗೀತ, ಸಾಹಿತ್ಯ, ಧರ್ಮ ಆಚಾರ ವಿಚಾರಗಳನ್ನು ಯುವಜನತೆಯಲ್ಲಿ ಪ್ರೇರಣೆಗೊಳಿಸುವ ಮೂಲಕ ಪುಟ್ಟರಾಜರು ಅಸಾಧಾರಣ ಕೊಡುಗೆ ನೀಡಿದ್ದಾರೆ ಎಂದರು.
ಕಂಪ್ಲಿ ಶಾರದಾ ಸಂಗೀತ ವಿದ್ಯಾಲಯದ ಪ್ರಾಚಾರ್ಯ ಕೆ.ಶ್ರೀನಿವಾಸ, ಗಂಗಾವತಿಯ ನರಸಿಂಹ ದರೋಜಿ, ಕಂಪ್ಲಿಯ ಕೆ.ಎಂ.ರಕ್ಷಿತಾ, ಕೆ.ಎಂ.ದೀಕ್ಷಿತಾ, ಕೆ.ಸಿಂಧುಜಾ, ವಡ್ಡರಹಟ್ಟಿಯ ರೇಖಾ ಇವರ ಗಾಯನಕ್ಕೆ, ಕಂಪ್ಲಿಯ ಕೆ.ದೊಡ್ಡಬಸಪ್ಪ, ಭೀಮೇಶ್ ಆಚಾರ್, ರಿಜ್ವಾನ್ ತಬಲಾಸಾತ್, ಗಂಗಾವತಿಯ ಕೆ.ರಾಮು ಹಾರ‌್ಮೋನಿಯಂ ಸಾತ್ ನೀಡಿದರು. ಇದಕ್ಕೂ ಮುನ್ನಾ ಕೋಟೆ ಪಂಪಾಪತಿ ದೇವಸ್ಥಾನದಿಂದ ಪಂಡಿತ್ ಪುಟ್ಟರಾಜ ಗವಾಯಿಗಳ ಭಾವಚಿತ್ರ ಮೆರವಣಿಗೆ ಜರುಗಿತು.
ಡಾ.ಪಂ.ಪುಟ್ಟರಾಜ ಗವಾಯಿಗಳವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಪದಾಧಿಕಾರಿಗಳಾದ ನವಣಕ್ಕಿ ಈಶಪ್ಪ, ಜೆ.ಎಂ.ಸಿದ್ರಾಮಯ್ಯಶಾಸ್ತ್ರಿ, ಜವುಕಿನ ಸತೀಶ್, ಯು.ಎಂ.ವಿದ್ಯಾಶಂಕರ್, ಈಶಪ್ಪ ಹೂಗಾರ್, ರಮೇಶ್ ಹೂಗಾರ್, ವೈ.ವೆಂಕಟರೆಡ್ಡಿ, ಅಯ್ಯಪ್ಪ ಹೂಗಾರ್, ಮಲ್ಲೇಶ್ ಮಾಳ್ಗಿ, ಕೆ.ಎಂ.ಬಸವರಾಜ ಶಾಸ್ತ್ರಿ ಸೇರಿ ಇತರರಿದ್ದರು.