

ಕಂಪ್ಲಿ: ಸಂವಿಧಾನ ಎಲ್ಲರಿಗೂ ಸಮಾನತೆ ನೀಡಿದ್ದು ಅಸ್ಪಶ್ಯತೆಯನ್ನು ತೊಲಗಿಸಲು ಪಣ ತೊಡಬೇಕಿದೆ ಎಂದು ಗ್ರೇಡ್-2 ತಹಸೀಲ್ದಾರ್ ಎಂ.ಆರ್.ಷಣ್ಮುಖ ಹೇಳಿದರು.
ತಹಸಿಲ್ ಕಚೇರಿ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ, ಸಿರಗುಪ್ಪ ನೇತ್ರಾ ಕಲಾ ಸಂಘದ ಸಹಯೋಗದಲ್ಲಿ ಸೋಮವಾರ ನಡೆದ ಅಸ್ಪಶ್ಯತಾ ನಿವಾರಣೆ ಜಾಗೃತಿ ಬೀದಿನಾಟಕ ಪ್ರದರ್ಶಕ್ಕೆ ಚಾಲನೆ ನೀಡಿ ಮಾತನಾಡಿದರು. ಎಲ್ಲ ಜಾತಿ, ಧರ್ಮಗಳು ಸಮಾನವಾಗಿದ್ದು, ಸರ್ವರು ವಿಶ್ವ ಮಾನವರಾಗಿ ಜೀವಿಸಬೇಕಿದೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣಬೇಕಿದೆ. ಜಾತೀಯತೆ, ಅಸ್ಪಶ್ಯತೆಯಂತಹ ಕೀಳು ಮನೋಭಾವ, ಅನಿಷ್ಟ ಪದ್ಧತಿಗಳಿಂದ ಎಲ್ಲರೂ ದೂರವಾಗಬೇಕು ಎಂದರು.
ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಪಾಲಕ ಕೆ.ವಿರೂಪಾಕ್ಷಪ್ಪ, ರಾಮಸಾಗರ ನಿಲಯಪಾಲಕ ಅರುಣ್, ಕಲಾತಂಡದ ಮುಖ್ಯಸ್ಥ ವೀರೇಶ್ ದಳವಾಯಿ, ಕಲಾವಿದರಾದ ಶಶಿ ಪಾಟೀಲ್, ಶಂಕ್ರಪ್ಪ, ಮಮತಮ್ಮ, ವಸಂತಮ್ಮ, ತಿಮ್ಮರಾಜು, ಶಿವು, ಶಂಕರ್ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಇದ್ದರು.