

ಕಂಪ್ಲಿ: ಮೆಕ್ಕೆಜೋಳಕ್ಕೆ ಸೂಕ್ತ ಬೆಲೆ ಇಲ್ಲದೆ ಮೆಕ್ಕೆಜೋಳ ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಉತ್ತಮ ತಳಿಯ ಮೆಕ್ಕೆಜೋಳ ಕೊಯ್ಲಗಿದ್ದು, ಇದೀಗ ಕ್ವಿಂಟಲ್‌ಗೆ 1295 ರೂ.ಧಾರಣಿ ಇದೆ. ಇದೇ ವರ್ಷದ ಬೇಸಿಗೆ ಹಂಗಾಮಿನಲ್ಲಿ 1400 ರೂ.ವರೆಗೂ ಬೆಲೆ ಸಿಕ್ಕಿತ್ತು. ಹಿಂದನ ವರ್ಷ ಇದೇ ಸಂದರ್ಭ 2100 ರೂ. ದರವಿತ್ತು. ದರ ಕುಸಿತದಿಂದಾಗಿ ಮೆಕ್ಕೆಜೋಳ ಬೆಳೆಗಾರರು ಚಿಂತೆಗೀಡಾಗಿದ್ದಾರೆ.
ಎಕರೆಗೆ 25ರಿಂದ 28 ಸಾವಿರ ರೂ. ವ್ಯಯಿಸಿ ಬೆಳೆ ಬೆಳೆದಿದ್ದು, ಇಳುವರಿಯೂ ಕಡಿಮೆಯಾಗಿದ್ದು ಎಕರೆಗೆ 25 ಕ್ವಿಂಟಲ್ ದೊರಕಿದೆ. ದರ ಕುಸಿತದಿಂದ ಎಕರೆಗೆ ಎಂಟರಿಂದ ಹತ್ತು ಸಾವಿರ ರೂ. ನಷ್ಟವಾಗುತ್ತಿದೆ. ಮೆಕ್ಕೆಜೋಳ ಬೆಳೆದ ರೈತರಿಗೆ ನಷ್ಟ ಪರಿಹಾರ ನೀಡುವಲ್ಲಿ ಸರ್ಕಾರ ಮುಂದಾಗಬೇಕು. ಈ ಭಾಗದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸುವಲ್ಲಿ ಜಾಗೃತಿ ತೋರಬೇಕು ಎಂದು ಮೆಕ್ಕೆಜೋಳ ಬೆಳೆದ ರೈತರಾದ ಎಸ್.ಸಣ್ಣ ನಂದ್ಯೆಪ್ಪ, ಎಸ್.ವೆಂಕಟೇಶ್, ನಡವಿ ಮಲ್ಲಿಕಾರ್ಜುನ ಇತರರು ಆಗ್ರಹಿಸಿದ್ದಾರೆ.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯುವ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.| ಶ್ರೀಧರ್ ಕೃಷಿ ಅಧಿಕಾರಿ ಕಂಪ್ಲಿ