

ಕಂಪ್ಲಿ: ರೈತರು ಕೃಷಿಗೆ ಅಗತ್ಯವಿದ್ದಷ್ಟು ನೀರು ಬಳಸುವ ಕೌಶಲ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಸಿ.ಆರ್.ಅಭಿಲಾಷ ತಿಳಿಸಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಸಾಂಸ್ಥಿಕ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಮೀನಿನಲ್ಲಿ ನೀರಿನ ಬಳಕೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಸುಸ್ಥಿರ ಜಲ ಸಂರಕ್ಷಣಾ ಪದ್ಧತಿಗಳನ್ನು ಪರಿಚಯಿಸಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ(ಪಿ.ಎಂ.ಕೆ.ಎಸ್.ವೈ) ರೈತರಿಗೆ ವರದಾನವಾಗಿದೆ ಎಂದರು.
ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಜಿ.ನಾರಪ್ಪ ಮಾತನಾಡಿ, ಹನಿ ನೀರಾವರಿ ಪದ್ಧತಿಯಿಂದ ಶೇ 30ರಿಂದ 40 ಇಳುವರಿ ಹೆಚ್ಚಿಸಬಹುದು. ಸೂಕ್ಷ್ಮನೀರಾವರಿಯಲ್ಲಿ ರಸವಾರಿ ಪದ್ಧತಿ ಮೂಲಕ ಶೇ.30ರಿಂದ 40 ರಸಾಯನಿಕ ಗೊಬ್ಬರಗಳ ಮಿತವ್ಯಯ ಸಾಧಿಸಬಹುದು. ಕಳೆ ನಿಯಂತ್ರಣ ಮಾಡಿ ಕೂಲಿ ವೆಚ್ಚವನ್ನು ಕಡಿಮೆ ಮಾಡಬಹುದು. ಗಿಡದಿಂದ ಗಿಡಕ್ಕೆ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು ಎಂದು ವಿವರಿಸಿದರು. ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಯೋಜನೆಯಡಿ ರೈತ ಫಲಾನುಭವಿಗಳಿಗೆ ದೊರೆಯುವ ಸಹಾಯಧನ ಕುರಿತು ಆತ್ಮ ಯೋಜನೆಯ ರೇಣುಕರಾಜ್ ಮಾಹಿತಿ ನೀಡಿದರು.