

ಕಂಪ್ಲಿ: ಕೃಷಿ ಸಂಬಂಧಿತ ಹೊಸ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿಕೊಳ್ಳುವಲ್ಲಿ ಕೃಷಿ ಗಣತಿ ಮಹತ್ವದ ಪಾತ್ರವಹಿಸಲಿದೆ ಎಂದು ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎನ್.ಸುನೀಲ್‌ಕುಮಾರ್ ತಿಳಿಸಿದರು.
ಇಲ್ಲಿನ ತಹಸಿಲ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 2021-22ನೇ ಸಾಲಿನ ಕೃಷಿ ಗಣತಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಕೃಷಿ ಗಣತಿಯಿಂದ ಕೃಷಿ ಅಂಕಿ ಅಂಶಗಳ ಸುಧಾರಣೆ, ಅಭಿವೃದ್ಧಿಗಾಗಿ ಸಂಘಟಿತ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯಕವಾಗುತ್ತದೆ. ಕೃಷಿ ಗಣತಿಯ ತರಬೇತಿ ಪಡೆದುಕೊಳ್ಳುವವರು ಕೃಷಿ ಗಣತಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಉಪ ತಹಸೀಲ್ದಾರ್ ಬಿ.ರವೀಂದ್ರಕುಮಾರ್, ಶಿರಸ್ತೇದಾರ್ ರಮೇಶ್, ಸಹಾಯಕ ಸಾಂಖ್ಯಿಕ ಅಧಿಕಾರಿ ಎಂ.ರವಿಕುಮಾರ್, ವಿಎಗಳಾದ ಟಿ.ಗಿರೀಶ್, ಜಿಲಾನ್, ಲಕ್ಷ್ಮಣಾನಾಯ್ಕ, ವಿಜಯಕುಮಾರ್, ಶಿವರುದ್ರಯ್ಯ, ರಾಘವೇಂದ್ರ ಸೇರಿ ಇತರರಿದ್ದರು.
ಮನವಿ: ಕೃಷಿ ಗಣತಿಗಾಗಿ ಟ್ಯಾಬ್ ಇಲ್ಲವೇ ಮೊಬೈಲ್ ಸಾಧನವನ್ನು ಒದಗಿಸಬೇಕು ಎಂದು ಗ್ರಾಮಲೆಕ್ಕಿಗರು ಇದೇ ಸಂದರ್ಭ ಆಗ್ರಹಿಸಿ ಜಿಲ್ಲಾ ಸಾಂಖ್ಯಿಕ ಅಧಿಕಾರಿಗೆ ಮನವಿ ಸಲ್ಲಿಸಿದರು.