

ಕಂಪ್ಲಿ: ಗುರುವಿನ ಮಾರ್ಗದರ್ಶನದಲ್ಲಿ ತಾನು ಯಾರೆಂಬುದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಜೀವನದ ಧ್ಯೇಯವಾಗಬೇಕು ಎನ್ನುವ ಶಂಕರರಾಚಾರ್ಯರ ತತ್ವ ತ್ರಿಕಾಲ ಸತ್ಯವಾಗಿದೆ ಎಂದು ಇಲ್ಲಿನ ಶ್ರೀಮನ್ನಾರಾಯಣಾಶ್ರಮದ ಪರಮಹಂಸ ನಾರಾಯಣ ವಿದ್ಯಾಭಾರತಿ ಶ್ರೀಗಳು ಹೇಳಿದರು.
ಸತ್ಯನಾರಾಯಣಪೇಟೆಯ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಶಂಕರಾಚಾರ್ಯರ ಜಯಂತಿ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಶ್ರೀಚಕ್ರ ಸಹಿತ ಶಾರದಾಂಬ, ನರ್ಮದೇಶ್ವರ(ಚಂದ್ರಮೌಳೇಶ್ವರ), ಶಂಕರಾಚಾರ್ಯರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದರು.
ಶಂಕರಾಚಾರ್ಯರ ‘ಅಹಂ ಬ್ರಹ್ಮಾಸ್ಮಿ’ ತತ್ವವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಸಂಸ್ಕಾರಬದ್ಧ, ಸಂಪ್ರದಾಯಬದ್ಧ ಜೀವನ ಶೈಲಿಯಿಂದ ಯಾರೂ ವಿಮುಖರಾಗಬಾರದು. ಸಮಸ್ತ ಮನುಕುಲ ಉದ್ಧಾರಕ್ಕಾಗಿ ಆದಿ ಶಂಕರರು ಕನ್ಯಾಕುಮಾರಿಯಿಂದ ಹಿಮಾಲಯದ ವರೆಗೆ ಪಾದಯಾತ್ರೆ ನಡೆಸಿದ್ದು ಸದಾ ಸ್ಮರಣೀಯವಾಗಿದೆ ಎಂದರು.
ಇದೇ ವೇಳೆ ಪಂಚಾಮೃತ ಅಭಿಷೇಕ, ಮಹಾರುದ್ರಾಭಿಷೇಕ, ಶಿವಸಹಸ್ರನಾಮ, ಶಂಕರಅಷ್ಟೋತ್ತರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸೇವಾಧರ್ಮದರ್ಶಿಗಳಾದ ವೈಷ್ಣವಿ ಕೃಷ್ಣಮೂರ್ತಿ, ಲಲಿತಾರಾಣಿ ಗಿರೀಶ್, ರೂಪಾ ಗುರುಪ್ರಸಾದ್, ಸವಿತಾ ಶ್ರೀಧರ್, ಭಗವತಿ, ಎನ್.ಚಂದ್ರಶೇಖರ್ ಇತರರು ಇದ್ದರು.