

ಕಂಪ್ಲಿ: ಪಟ್ಟಣದಲ್ಲಿ 22 ಕೋಟಿ ರೂ.ವೆಚ್ಚದಲ್ಲಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಸಪೇಟೆ ಬೈಪಾಸ್ ರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧ ಬಳಿ ಡಿಎಂಎಫ್ ಅನುದಾನದಲ್ಲಿ 100 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿದ್ಧವಾಗಲಿದೆ. ತಾಲೂಕು ಕೇಂದ್ರವಾಗಿ ರೂಪುಗೊಂಡ ನಂತರ 100 ಹಾಸಿಗೆ ಆಸ್ಪತ್ರೆಯ ಅಗತ್ಯವಿತ್ತು. ಸೋಮವಾರ ನಡೆದ ವಿಡಿಯೋ ಸಂವಾದಲ್ಲಿ ಮುಖ್ಯಮಂತ್ರಿಗೆ ಮನವರಿಕೆ ಮಾಡಿಕೊಡಲಾಯಿತು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಸಹ ಧ್ವನಿಗೂಡಿಸಿದ್ದರಿಂದ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷೆ ಶಾಂತಲಾ ವಿದ್ಯಾಧರ, ತಹಸೀಲ್ದಾರ್ ಗೌಸಿಯಬೇಗಂ ಇತರರಿದ್ದರು.