ಬೆಂಗಳೂರಲ್ಲಿ ಪ್ರಥಮ, ಶಿವಮೊಗ್ಗದಲ್ಲಿ ಕೊನೇ ಕಂಬಳ

Mbd_Kambala 1
Published on

ಮೂಡುಬಿದಿರೆ: ಈ ಬಾರಿ ತುಳುನಾಡಿನ ಜತೆಗೆ ಮಲೆನಾಡಲ್ಲೂ ಕಂಬಳ ನಡೆಯಲಿದೆ. ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಪ್ರಸಕ್ತ ಋತುವಿನ ಪ್ರಥಮ ಹಾಗೂ ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು.

ಮೂಡುಬಿದಿರೆ ಸ್ವರ್ಣ ಮಂದಿರದಲ್ಲಿ ಶನಿವಾರ ಜಿಲ್ಲಾ ಕಂಬಳ ಸಮಿತಿ ವಿಶೇಷ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಯಾಸ್ ಲೂಯಿಸ್ ಅವರ ಆಸಕ್ತಿಯಲ್ಲಿ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಕಂಬಳ ನಡೆಯಲಿದೆ. ಮಾಜಿ ಡಿಸಿಎಂ ಈಶ್ವರಪ್ಪ ಮತ್ತಿತರರು ಅಲ್ಲಿ ಕಂಬಳ ನಡೆಯಲು ಸಹಕಾರ ನೀಡಲಿದ್ದಾರೆ. ಈ ವರ್ಷದ ಕೊನೆಯ ಕಂಬಳ ಏಪ್ರಿಲ್‌ನಲ್ಲಿ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ತಿಳಿಸಿದರು.

26 ಕಂಬಳಗಳಿಗೆ ದಿನ ನಿಗದಿ

ಜಿಲ್ಲಾ ಕಂಬಳ ಸಮಿತಿ ನೇತೃತ್ವದಲ್ಲಿ ಈ ವರ್ಷದಲ್ಲಿ 26 ಕಂಬಳಗಳು ನಡೆಯಲಿವೆ. ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಮೊದಲ ಕಂಬಳ ನಡೆಯಲಿದ್ದು, 2025ರ ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ಕೊನೆಯ ಕಂಬಳ ನಡೆಯಲಿದೆ. ಈಗಾಗಲೇ ಜಿಲ್ಲೆಯಲ್ಲಿ ಕಂಬಳವನ್ನು ಶಿಸ್ತುಬದ್ಧವಾಗಿ ನಡೆಸುತ್ತಿದ್ದು ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಇದನ್ನು ಮತ್ತಷ್ಟು ಆಕರ್ಷಣೀಯವಾಗಿ ನಡೆಸಲು ಕೆಲವೊಂದು ನಿಯಮಗಳನ್ನು ಆಯಾ ಕಂಬಳ ಸಮಿತಿಗಳು ಪಾಲಿಸಬೇಕಾಗಿದ್ದು, ಅದಕ್ಕಾಗಿ ಉಪನಿಬಂಧನೆಗಳನ್ನು ರಚಿಸಲಾಗುವುದು. ಕಂಬಳ ವಿಳಂಬವಾಗುವುದನ್ನು ತಡೆಯಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

ಪಿಲಿಕುಳ ಕಂಬಳ ಪುನರಾರಂಭ

ನಿಂತು ಹೋಗಿದ್ದ ಪಿಲಿಕುಳ ಕಂಬಳವನ್ನು ಈ ವರ್ಷದಿಂದ ಪುನರಾರಂಭಿಸಲಾಗುವುದು. ಕಂಬಳವನ್ನು ಪ್ರವಾಸೋದ್ಯಮದ ಭಾಗವಾಗಿಸುವ ನಿಟ್ಟಿನಲ್ಲಿ ಈ ಕಂಬಳದಲ್ಲಿ 4 ದಿನಗಳ ‘ತುಳುನಾಡ ವೈಭವ’ ಕಾರ್ಯಕ್ರಮ ನಡೆಯಲಿದೆ. ಕಂಬಳ ಕುರಿತ ವಸ್ತು ಪ್ರದರ್ಶನ ಏರ್ಪಡಿಸಲಾಗುವುದು. ಅಲ್ಲದೆ ಕಂಬಳ ಭವನ ನಿರ್ಮಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಡೆಯುವ 24 ಕಂಬಳಗಳಿಗೂ ತಲಾ 5 ಲಕ್ಷ ರೂ.ನಂತೆ ಸರ್ಕಾರ ಅನುದಾನ ಬಿಡುಗಡೆಗೊಳಿಸಬೇಕು. ಈ ಕುರಿತು ಕಂಬಳ ನಿಯೋಗ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿಯಾಗಿ ಬೇಡಿಕೆ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಜಿಲ್ಲಾ ಸಮಿತಿ ಮಹಾಸಭೆಯಲ್ಲಿ ಒಪ್ಪಿಗೆ

ಶಿವಮೊಗ್ಗ ಕಂಬಳ ಸಮಿತಿಯ ಎಲ್ಯಾಸ್ ಲೂಯಿಸ್ ಮಾತನಾಡಿ, ಈ ಬಾರಿ ಶಿವಮೊಗ್ಗದಲ್ಲೂ ಕಂಬಳ ನಡೆಯಲಿದೆ. ಕಾಂತಾರ ಸಿನಿಮಾದಲ್ಲಿ ಕಂಬಳ ನೋಡಿದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಕಂಬಳ ಮಾಡುವ ಉತ್ಸಾಹ ಬಂತು. ಈ ಕಂಬಳ ನಡೆಸಲು ರೋಟರಿ ಸಂಸ್ಥೆ ಸಹಿತ ತುಂಬಾ ಮಂದಿ ಬೆಂಬಲ ನೀಡುತ್ತಿದ್ದಾರೆ. ಮಾಜಿ ಡಿಸಿಎಂ ಈಶ್ವರಪ್ಪ, ಅವರ ಮಗ ಕಾಂತೇಶ್ ಮತ್ತು ಅವರ ಆಪ್ತ ಸಂತೋಷ್, ರೋಟರಿ ಸಂಸ್ಥೆ ಹಾಗೂ ಇತರರೂ ಈ ಕಂಬಳಕ್ಕೆ ಸಹಕರಿಸುತ್ತಿದ್ದಾರೆ ಎಂದರು.

ಶಿವಮೊಗ್ಗ ಕಂಬಳ ಸಮಿತಿಗೆ ಇದೇ ವೇಳೆ ಸದಸ್ಯತ್ವ ನೀಡಲಾಯಿತು. ಮುಡಾ ಅಧ್ಯಕ್ಷರಾಗಿ ಆಯ್ಕೆಯಾದ ಕಂಬಳ ಕೋಣಗಳ ಯಜಮಾನ ಹರ್ಷವರ್ಧನ ಪಡಿವಾಳ್ ಅವರನ್ನು ಸನ್ಮಾನಿಸಲಾಯಿತು.

ಕಂಬಳ ಸಮಿತಿ ಗೌರವಾಧಕ್ಷ ಎರ್ಮಾಳ್ ರೋಹಿತ್ ಹೆಗ್ಡೆ, ಉಪಾಧ್ಯಕ್ಷರಾದ ನವೀನಚಂದ್ರ ಆಳ್ವ, ಶ್ರೀಕಾಂತ ಭಟ್, ಸಂದೀಪ ಶೆಟ್ಟಿ, ಪ್ರಶಾಂತ ಕಾಜವ, ರಶ್ಮಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಮುಚ್ಚೂರು, ಕೋಶಾಧಿಕಾರಿ ಚಂದ್ರಹಾಸ ಸನಿಲ್, ತೀರ್ಪುಗಾರರ ಸಂಚಾಲಕ ವಿಜಯ್‌ಕುಮಾರ್ ಕಂಗಿನಮನೆ, ಶಿವಮೊಗ್ಗ ಕಂಬಳ ಸಮಿತಿಯ ಕಲ್ಪನಾ, ವಿಮಲೇಶ್ ಹೆಗ್ಡೆ, ನಾಗರಾಜ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net