ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ಸಹಿತ ಮೂವರ ವಿರುದ್ಧ ದೂರು

IMG_20220720_135835
Published on

ಮಂಗಳೂರು: ಕಂಬಳ ಕ್ಷೇತ್ರದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ಸೇರಿದಂತೆ ಮೂವರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಎಂಬುವವರು ದೂರು ನೀಡಿದ್ದಾರೆ. ಉಸೇನ್ ಬೋಲ್ಟ್ ದಾಖಲೆ ಮುರಿದ ಹೆಸರಲ್ಲಿ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಹಣ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.


ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಅಕಾಡೆಮಿಯ ಗುಣಪಾಲ ಕಡಂಬ ಮತ್ತು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸೈ ವೀವ್ ಮಾಲೀಕ ರತ್ನಾಕರ ಎಂಬವರ ವಿರುದ್ಧವೂ ದೂರು ನೀಡಲಾಗಿದೆ.

ಅಧಿಕೃತ ಮಾನ್ಯತೆ ಪಡೆಯದ, ನಂಬಲಾರ್ಹವಲ್ಲದ ಸೈವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ನೀಡಲಾಗಿದೆ ಎನ್ನಲಾಗುತ್ತಿದೆ. ಪೊಲೀಸರು ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಹೇಳಲಾಗಿದೆ.

2020ರ ಫೆ.1ರಂದು ಐಕಳ ಕಂಬಳದಲ್ಲಿ 100 ಮೀ. ದೂರವನ್ನು 9.55 ಸೆಕೆಂಡ್ ನಲ್ಲಿ ಶ್ರೀನಿವಾಸ ಗೌಡ ಕ್ರಮಿಸಿದ್ದರು. ಬಳಿಕ ಅವರನ್ನು ಸರ್ಕಾರ ಹಾಗೂ ಹಲವು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net