

ಮಂಗಳೂರು/ಬಂಟ್ವಾಳ: ಕೋವಿಡ್-19ನಿಂದ ಎರಡು ತಿಂಗಳು ವಿಳಂಬವಾಗಿ ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಕಂಬಳ ಆಯೋಜಿಸುತ್ತಿದ್ದು, ಈ ಸಾಲಿನ ಪ್ರಥಮ ಜೋಡುಕರೆ ಕಂಬಳ ಜ.30ರಂದು ಬಂಟ್ವಾಳದಲ್ಲಿ ಚಾಲನೆ ಪಡೆದುಕೊಳ್ಳಲಿದೆ.
ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕುಗಳ ಗಡಿಭಾಗದ ಇತಿಹಾಸ ಪ್ರಸಿದ್ಧ ‘ಹೊಕ್ಕಾಡಿಗೋಳಿ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳ’ ಕೋವಿಡ್ ನಿಯಮಾವಳಿ ಅನುಸರಿಸಿ ಶನಿವಾರ ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ ನಡೆಯಲಿದ್ದು, ಸಿದ್ಧತೆ ಅಂತಿಮಗೊಂಡಿದೆ. ಮಹಿಷಮರ್ಧಿನಿ ಕಂಬಳ ಸಮಿತಿ ಆಯೋಜಿಸುತ್ತಿದೆ.
ಈಗಾಗಲೇ ಎಲಿಯನಡುಗೋಡು, ಆರಂಬೋಡಿ ಮತ್ತಿತರ ಗ್ರಾಮಸ್ಥರು ಮತ್ತು ಕಂಬಳಾಸಕ್ತರು ಶ್ರಮದಾನ ಮೂಲಕ ಕಂಬಳ ಕರೆ ದುರಸ್ತಿ ಮಾಡಿದ್ದಾರೆ. ಕಂಬಳಕ್ಕೆ ಸ್ಥಳೀಯ ಪೂಂಜ ಕ್ಷೇತ್ರದ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಚಾಲನೆ ನೀಡಲಿದ್ದು, ಪ್ರಧಾನ ಅರ್ಚಕ ಪ್ರಕಾಶ್ ಆಚಾರ್ಯ, ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ. ಭಾಗವಹಿಸುವರು. ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಲಿದ್ದು, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಸುನೀಲ್ ಕುಮಾರ್, ಕುಮಾರ್ ಬಂಗಾರಪ್ಪ, ಹರೀಶ ಪೂಂಜ, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಕೆ.ಹರೀಶ ಕುಮಾರ್, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ, ಕಿಯಾನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಅರುಣ್‌ಶ್ಯಾಮ್, ರಾಷ್ಟ್ರೀಯ ಕಬಡ್ಡಿ ಆಟಗಾರ ಸುಕೇಶ್ ಹೆಗ್ಡೆ, ಪ್ರಶಾಂತ್ ರೈ ಮತ್ತಿತರರು ಭಾಗವಹಿಸುವರು.
ಉತ್ತಮ ಸ್ಪಂದನೆ ನಿರೀಕ್ಷೆ: ಕೋವಿಡ್ ಕಾರಣದಿಂದ ಸ್ಪರ್ಧಾತ್ಮಕ ಕಂಬಳಗಳಿಗೂ ಕಡಿವಾಣ ಬಿದ್ದಿರುವ ಹಿನ್ನೆಲೆಯಲ್ಲಿ ಹೊಕ್ಕಾಡಿಗೋಳಿ ಕಂಬಳಕ್ಕೆ ಹೆಚ್ಚು ಕೋಣಗಳು ಆಗಮಿಸುವ ನಿರೀಕ್ಷೆ ಇದೆ. ಸುಮಾರು 150 ಜೋಡಿ ಕೋಣಗಳು ಭಾಗವಹಿಸಬಹುದು ಎಂದು ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ತಿಳಿಸಿದ್ದಾರೆ.
ನಿಯಮಗಳೇನು?: ರಾತ್ರಿ 10ರೊಳಗೆ ಕಂಬಳ ಮುಗಿಸಬೇಕು. 10ರೊಳಗಿನ ಮಕ್ಕಳು ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಾರದು, ಹೆಚ್ಚು ಜನ ಸೇರಿಸಬಾರದು ಎನ್ನುವುದು ಜಿಲ್ಲಾಡಳಿತದ ಸೂಚನೆ. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್, ಪರಸ್ಪರ ಅಂತರ ಕಡ್ಡಾಯ. ಕಂಬಳಕ್ಕೆ ಆಗಮಿಸುವ ಬದಲು ಮನೆಗಳಲ್ಲೇ ಕುಳಿತು ಟಿವಿ/ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಕಂಬಳ ಮೊದಲಲ್ಲ: ಈ ಋತುವಿನಲ್ಲಿ ಕಂಬಳ ಇದೇ ಮೊದಲೇನಲ್ಲ. ನವೆಂಬರ್ ತಿಂಗಳಲ್ಲೇ ಸಾಂಪ್ರದಾಯಿಕ/ಕುದಿ ಕಂಬಳಗಳು ಆರಂಭಗೊಂಡಿವೆ. ಕಳೆದ ಭಾನುವಾರ ಮೂಡುಬಿದಿರೆ ಸಮೀಪ 12ನೇ ವರ್ಷದ ಪಣಪಿಲ ಜಯವಿಜಯ ಜೋಡುಕರೆ ಕಂಬಳ ನಡೆದಿದ್ದು, 118 ಜೋಡಿ ಕೋಣಗಳು ಪಾಲ್ಗೊಂಡಿದ್ದವು. ಹಗ್ಗ ಕಿರಿಯ, ನೇಗಿಲು ಕಿರಿಯ ವಿಭಾಗ ಹಾಗೂ ನೇಗಿಲು ಅತಿ ಕಿರಿಯ ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. ಸಬ್ ಜೂನಿಯರ್ ವಿಭಾಗದಲ್ಲಿ 56 ಜೋಡಿ ಕೋಣಗಳು ಭಾಗವಹಿಸಿದ್ದವು. ಬೆಳಗ್ಗೆ ಆರಂಭಗೊಂಡ ಕಂಬಳ ಸಾಯಂಕಾಲ 6 ಗಂಟೆಗೆ ಮುಕ್ತಾಯ ಕಂಡಿತ್ತು.
10 ಕಂಬಳ ನಡೆಸುವುದು ಕಷ್ಟ: ಈ ಬಾರಿ 10 ಕಂಬಳ ನಡೆಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆಯಾದರೂ, ಸಮಯದ ಅಭಾವದಿಂದ ಅಷ್ಟು ನಡೆಸುವುದು ಕಷ್ಟ ಎನ್ನುತ್ತಾರೆ ಕಂಬಳ ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ. ಮುಂದೆ ಫೆ.6- ಐಕಳ, ಫೆ.13- ವಾಮಂಜೂರು, ಫೆ.21-ಮೂಡುಬಿದಿರೆ, ಫೆ.27- ಮಿಯ್ಯರು, ಮಾ.7- ಮಂಗಳೂರು ಹಾಗೂ ಮಾ.20- ವೇಣೂರು ಕಂಬಳಗಳಿಗೆ ದಿನಾಂಕ ನಿಗದಿಯಾಗಿದೆ. ಮಾರ್ಚ್ ಕೊನೆಯ ಹೊತ್ತಿಗೆ ಬಿಸಿಲ ಧಗೆ ತೀವ್ರಗೊಳ್ಳುವುದರಿಂದ ಕೋಣಗಳಿಗೆ ಓಡುವುದು ಕಷ್ಟ. ಹಾಗಾಗಿ ನಂತರ ಕಂಬಳ ನಡೆಸಲಾಗದು ಎಂದು ಅಭಿಪ್ರಾಯಪಟ್ಟಿದ್ದಾರೆ.