

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಕಂಬಳಕ್ಕೆ ಸರ್ಕಾರದ ಮಾನ್ಯತೆ ಹಾಗೂ ಕಂಬಳ ಆಯೋಜನೆಗೆ ಹೈಕೋರ್ಟ್ ಅನುಮತಿ ನೀಡಿರುವುದರಿಂದ ಅತ್ಯಂತ ಜಾಗರೂಕರಾಗಿ ಕಂಬಳಗಳನ್ನು ಶಿಸ್ತುಬದ್ಧವಾಗಿ, ಸಮಯ ಪರಿಪಾಲನೆಯೊಂದಿಗೆ ನಡೆಸುವ ಕುರಿತು ಬುಧವಾರ ನಡೆದ ರಾಜ್ಯ ಕಂಬಳ ಅಸೋಸಿಯೇಷನ್ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ನಿರ್ಣಯಿಸಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರಾವಳಿ ಭಾಗದ ಜನಪ್ರತಿನಿಧಿಗಳ ಬೆಂಬಲದಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಅಧಿವೇಶನದಲ್ಲೂ ಮುಖ್ಯಮಂತ್ರಿಗಳು ರಾಜ್ಯ ಮಾನ್ಯತೆಯ ಭರವಸೆ ನೀಡಿದ್ದರು. ಅಸೋಸಿಯೇಷನ್ ಅಸ್ವಿತ್ವಕ್ಕೆ ಬಂದಿರುವುದರಿಂದ ಸರ್ಕಾರದ ನಿರ್ದೇಶನದಂತೆ ನಮ್ಮ ಕಾರ್ಯವೈಖರಿ ನಡೆಯಬೇಕಾಗಿದೆ. ಕಂಬಳಗಳಿಗೆ ಅನುದಾನ, ಕಂಬಳ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸಹಿತ ವಿವಿಧ ಸವಲತ್ತುಗಳಿಗೆ ಬೇಕಾದ ದಾಖಲೆಗಳನ್ನು ಕ್ರೋಡೀಕರಿಸುವುದು ಅಗತ್ಯ. ಕಂಬಳಕ್ಕೆ ಸಂಬಂಧಪಟ್ಟ ಎಲ್ಲರೂ ಅಸೋಸಿಯೇಷನ್ ಜತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಅವರನ್ನು ಪದಾಧಿಕಾರಿಗಳು ಅಭಿನಂದಿಸಿದರು. 2025-26 ಸಾಲಿನ ಕಂಬಳ ವೇಳಾಪಟ್ಟಿ ಹಾಗೂ ಕಂಬಳದ ನೀತಿ ನಿಯಮ ಒಳಗೊಂಡ ಪುಸ್ತಕ ಬಿಡುಗಡೆಗೊಳಿಲಾಯಿತು. ಕಂಬಳ, ತುಳುನಾಡು ಹಾಗೂ ಕ್ರೀಡಾ ಪ್ರಾಧಿಕಾರದ ಧ್ವಜವನ್ನು ಪ್ರತಿ ಕಂಬಳಗಳಲ್ಲಿ ಅಳವಡಿಸುವಂತೆ ಸೂಚಿಸಲಾಯಿತು.
ಉಪಾಧ್ಯಕ್ಷ ನವೀನ್‌ಚಂದ್ರ ಆಳ್ವ, ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ರೋಹಿತ್ ಕುಮಾರ್ ಹೆಗ್ಡೆ, ಶಾಂತರಾಮ್ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್, ಶ್ರೀಕಾಂತ್ ಭಟ್, ಪಿ.ಆರ್.ಶೆಟ್ಟಿ, ಚಂದ್ರಹಾಸ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಕಾಜವ, ಅರುಣ್ ಶೆಟ್ಟಿ, ಚಂದ್ರಹಾಸ ಸನಿಲ್, ಪಿಯೂಸ್ ಎಲ್.ರೊಡ್ರಿಗಸ್, ಸುಧಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಸಹ ಸದಸ್ಯರಾದ ವಿಕ್ರಂ ವೆಂಕಟ್ ಪೂಜಾರಿ, ಕೇಶವ ಭಂಡಾರಿ ಉಪಸ್ಥಿತರಿದ್ದರು.
ಸಬ್‌ಜೂನಿಯರ್ ವಿಭಾಗವಿಲ್ಲ
ಕಂಬಳಗಳಲ್ಲಿ ಸಬ್‌ಜೂನಿಯರ್ ವಿಭಾಗವನ್ನು ಕೈಬಿಡುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು. ಸ್ನೇಹಕೂಟ ಕಂಬಳ ಬೇಕೇ? ಬೇಡವೇ? ಎನ್ನುವ ಕುರಿತು ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ತೀರ್ಮಾನಿಸಲಾಯಿತು.