

ಮೂಡುಬಿದಿರೆ: ಸಾಂಪ್ರದಾಯಿಕ ಕಂಬಳ ಹೊರತುಪಡಿಸಿ ಉಳಿದ ಕಂಬಳಗಳಲ್ಲಿ ಬೆಳಗ್ಗೆ 9 ಗಂಟೆಗೆ ಕೋಣಗಳನ್ನು ಕರೆಗೆ ಇಳಿಸಿ 24 ಗಂಟೆಗಳೊಳಗೆ ಮುಗಿಸುವ ಜವಾಬ್ದಾರಿ ಸ್ಥಳೀಯ ಕಂಬಳ ವ್ಯವಸ್ಥಾಪಕರದು, ಒಂದು ಕಂಬಳದಲ್ಲಿ ಓಟಗಾರರು ಗರಿಷ್ಠ ಮೂರು ಜೊತೆ ಕೋಣಗಳನ್ನಷ್ಟೇ ಓಡಿಸಬೇಕು, ಆದರೆ 2 ಜೊತೆ (ಎ,ಬಿ) ಕೋಣಗಳ ಯಜಮಾನರ ಇಬ್ಬರು ಓಟಗಾರರ ಪೈಕಿ ಒಬ್ಬರಿಗೆ ಗಂಭೀರ ಸ್ವರೂಪದ ಗಾಯದ ಸಮಸ್ಯೆ, ಅಸೌಖ್ಯ, ಅಮೆ, ಕರ, ಸೂತಕಾದಿ ಸಮಸ್ಯೆಗಳು ಎದುರಾದರೆ, ಇನ್ನೊಂದು ಜೊತೆ ಕೋಣಗಳನ್ನು ಹೆಚ್ಚುವರಿ ಓಡಿಸಲು ಅವಕಾಶ ಸಿಗಬೇಕು.
- ಕಂಬಳದಲ್ಲಿ ನೀತಿ ರೂಪಿಸುವ ಬಗ್ಗೆ ಸಮಾಜ ಮಂದಿರದಲ್ಲಿ ಬುಧವಾರ ಕಂಬಳ ಶಿಸ್ತು ಪಾಲನಾ ಸಮಿತಿ ಚರ್ಚಿಸಿದ ಪ್ರಮುಖ ಅಂಶಗಳಿವು.
ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಸಂಬಂಧಪಟ್ಟ ಹಲವು ವಿಷಯಗಳಲ್ಲಿ ಬದಲಾವಣೆ ಬಗ್ಗೆ ಚರ್ಚಿಸಲಾಯಿತು. ಗಂತಿನ ಮತ್ತು ಮಂಜೊಟ್ಟಿಯ ತೀರ್ಪುಗಾರರ ಕೌಂಟರ್‌ಗಳಿಗೆ ತೀರ್ಪುಗಾರರು ಹೊರತುಪಡಿಸಿ ಇತರಿಗೆ ಪ್ರವೇಶ ನಿಷೇಧ ಮತ್ತು ಈ ಬಗ್ಗೆ ಸಂಪೂರ್ಣ ಬಂದೋಬಸ್ತು ಮಾಡಬೇಕು. ಕಂಬಳ ಸಂದರ್ಭ ಯಜಮಾನರಿಗೆ ಅಥವಾ ತೀರ್ಪುಗಾರರಿಗೆ ಸಮಸ್ಯೆಗಳು ಎದುರಾದರೆ, ಜಿಲ್ಲಾ ಕಂಬಳ ಸಮಿತಿ ಮತ್ತು ಕಂಬಳ ಆಯೋಜಕ ಸಮಿತಿ ಶೀಘ್ರ ಇತ್ಯರ್ಥಗೊಳಿಸುವ ಬಗ್ಗೆ ಚರ್ಚಿಸಲಾಯಿತು.
ಶಿಸ್ತು ಪಾಲನಾ ಸಮಿತಿ ಸದಸ್ಯರಾದ ಎರ್ಮಾಳ್ ರೋಹಿತ್ ಹೆಗ್ಡೆ, ರೆಂಜಾಳ ಕಾರ್ಯ ಸುರೇಶ್ ಕೆ.ಪೂಜಾರಿ, ರಾಜೀವ್ ಶೆಟ್ಟಿ ಇರ್ವತ್ತೂರು, ಸಾಂಪ್ರಾದಾಯಿಕ ಕಂಬಳದ ಬೈಂದೂರು ವೆಂಕಟ ಪೂಜಾರಿ ಉಪಸ್ಥಿತರಿದ್ದರು. ವಿಜಯಕುಮಾರ್ ಕಂಗಿನಮನೆ ಕಾರ್ಯ ಕ್ರಮ ನಿರೂಪಿಸಿದರು.
ಶಿಸ್ತು ಉಲ್ಲಂಘನೆಯಾದರೆ 3 ದಿನದಲ್ಲಿ ತೀರ್ಮಾನ: ತೀರ್ಪುಗಾರರು ಕಾರ್ಯನಿರ್ವಹಿಸುವ ಸಂದರ್ಭ ಶಿಸ್ತು ಉಲ್ಲಂಘನೆಯಾದಲ್ಲಿ ಜಿಲ್ಲಾ ಕಂಬಳ ಕಾರ್ಯಕಾರಿ ಸಮಿತಿ ಸಭೆ ಮೂರು ದಿನಗಳಲ್ಲಿ ಕರೆದು, ತಪ್ಪಿತಸ್ಥರ ಬಗ್ಗೆ ತೀರ್ಮಾನ ಕೈಗೊಂಡು, ಅಮಾನತಿನಂತಹ ಶಿಕ್ಷೆಗೆ ಒಳಪಡಿಸಬೇಕು. ಶಿಕ್ಷೆ ಸ್ವರೂಪವನ್ನು ಮುಂದಿನ ಸಭೆಯಲ್ಲಿ ತೀರ್ಮಾನಿಸುವ ಕುರಿತು ಮಾತುಕತೆ ನಡೆಯಿತು. ಕಂಬಳದಲ್ಲಿ ತೀರ್ಪು ನೀಡುವ ಸಂದರ್ಭ ಮದ್ಯಪಾನ ಮಾಡಿದ್ದರೆ ತೀರ್ಪುಗಾರರಿಗೂ ಕಾನೂನು ಕ್ರಮ ಅನ್ವಯಿಸಬೇಕು ಎಂಬ ಸಲಹೆ ಕೇಳಿಬಂತು.