ಕಾಡಬೆಟ್ಟುವಿನಲ್ಲಿ ಕಂಬಳ ಕೋರಿ : ತುಳುನಾಡಿನ ಕೃಷಿ ಪ್ರಧಾನ ಪರಂಪರೆಯ ವಿಶಿಷ್ಟ ಆಚರಣೆ

New Project (12)
Published on

ಬಂಟ್ವಾಳ: ಐದುನೂರು ವರ್ಷಗಳ ಇತಿಹಾಸ ಹೊಂದಿದ, ಕೃಷಿ ಪ್ರಧಾನ ತುಳುನಾಡಿನಿಂದ ದೂರ ಸರಿಯುತ್ತಿರುವ ಸಾಂಪ್ರದಾಯಿಕ ಆಚರಣೆಯಾದ ಕಂಬಳ ಕೋರಿ ಎನ್ನುವ ಗದ್ದೆಪೂಜೆ ಇತ್ತೀಚೆಗೆ ನಡೆಯಿತು.

ಬಂಟ್ವಾಳ ತಾಲೂಕಿನ ಕಾಡಬೆಟ್ಟುವಿನಲ್ಲಿ ಪೂಕರೆ ಬಂಡಿಯನ್ನು ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಭಾನುವಾರ ಎಳೆದರು.

ಕೃಷಿ ಸಂಸ್ಕೃತಿಯ ಪ್ರಕಾರ ದೈವಗಳ ಆರಾಧನೆಯೊಂದಿಗೆ ಭೂದೇವಿಯನ್ನು ಆರಾಧಿಸುವ ಕ್ರಮ ಕಂಬಳ ಕೋರಿ ಎನ್ನುವ ಗದ್ದೆಪೂಜೆ. ಕಂಬಳ ಕೋರಿಯ ದಿನ ಕಂಬಳ ಗದ್ದೆಗೆ ಕೋಣಗಳನ್ನು ಇಳಿಸಿ ಗದ್ದೆ ಉಳುತ್ತಾರೆ. ಇತ್ತ ಗುತ್ತಿನ ಮನೆಯಲ್ಲಿ ಗ್ರಾಮದೈವಗಳಿಗೆ ಪರ್ವ ಹಾಕಿಸಿ, ಪಂಜುರ್ಲಿ ದೈವದ ಹಗಲು ನೇಮೋತ್ಸವ ನಡೆಯುತ್ತದೆ. ಬಳಿಕ ಎಲ್ಲರೂ ಗ್ರಾಮಸ್ಥರೊಂದಿಗೆ ಕೊಂಬು ವಾಲಗದ ಹಿಮ್ಮೇಳದೊಂದಿಗೆ ಕಂಬಳ ಗದ್ದೆಗೆ ಬರುತ್ತಾರೆ.

ಪೂಕರೆ ಬಂಡಿ ಎಳೆಯುವ ಗದ್ದೆಯ ಬದಿಯಲ್ಲಿ ನಾಗಬ್ರಹ್ಮ ದೈವ ಅಣಿ ಏರಿಸಿ ಸಿದ್ಧಗೊಂಡಿರುತ್ತದೆ. ಅಲ್ಲಿ ಸಿದ್ಧಗೊಂಡ ಕಲ್ಲಿನ ಚಕ್ರವುಳ್ಳ ಸಾಗುವಾನಿ ಮರದ ಪಟ್ಟಿಗಳುಳ್ಳ ತೇರಿನಾಕಾರದ ಪೂಕರೆ ಬಂಡಿಯನ್ನು ಗ್ರಾಮಸ್ಥರೆಲ್ಲ ಸೇರಿ ಎಳೆದುಕೊಂಡು ಗದ್ದೆಯ ಮಧ್ಯಭಾಗಕ್ಕೆ ತಂದು ನಿಲ್ಲಿಸುತ್ತಾರೆ. ವಿಶಾಲ ಗದ್ದೆಗೆ ನಾಗಬ್ರಹ್ಮ ದೈವಪಾತ್ರಿ ಎಲ್ಲರ ಜತೆ ಸುತ್ತು ಬಂದು ಉತ್ತಮ ಫಸಲು ಬರುವಂತೆ ಹರಸುತ್ತಾರೆ. ದೈವದ ಜತೆ ಓರ್ವ ವೇಷಧಾರಿ ಇದ್ದು ಎಲ್ಲ ಕಾರ್ಯಕ್ರಮಗಳನ್ನು ನಡೆಸಲು ಸೂಚನೆ ನೀಡುತ್ತದೆ. ಅಲ್ಲಿಂದ ಗುತ್ತಿನ ಮನೆಗೆ ಹಿಂದಿರುಗಿ ನಾಗಬ್ರಹ್ಮ ದೈವಕ್ಕೆ ನೇಮ ನಡೆಯುತ್ತದೆ. ಜತೆಗೆ ಪಂಜುರ್ಲಿ ದೈವದ ನೇಮ ಮುಂದುವರಿದು ದೈವ ನುಡಿ ಕೊಡುವುದರೊಂದಿಗೆ ಮುಕ್ತಾಯವಾಗುತ್ತದೆ.

ಈ ಕಾರ್ಯಕ್ರಮದಲ್ಲಿ ದೈವ ಪಾತ್ರಿಗಳು, ಬ್ಯಾಂಡ್, ವಾಲಗದವರ ಸಹಿತ ಎಲ್ಲ ಕಾರ್ಯಗಳನ್ನು ಕಾಡಬೆಟ್ಟು ಗ್ರಾಮದವರೇ ನಿರ್ವಹಿಸುವುದು ವಿಶೇಷ. ದೈವಾರಾಧನೆ ಮೂಲಕ ಈ ಕಾರ್ಯದಲ್ಲಿ ಗ್ರಾಮಸ್ಥರೆಲ್ಲರೂ ಒಂದಾಗಿ ಭಾಗವಹಿಸುತ್ತಾರೆ.

ಹಲವು ಗಣ್ಯರು ಭಾಗಿ

ಈ ಸಲ ಮಾಜಿ ಸಚಿವ ಬಿ.ರಮಾನಾಥ ರೈ, ತಂತ್ರಿ ನಾರಾಯಣ ಶಿಬರಾಯ, ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಬಿ.ಪದ್ಮಶೇಖರ ಜೈನ್, ಆನುವಂಶೀಯ ಆಡಳಿತದಾರ ಮಹಾವೀರ ಅಜ್ರಿ ಕಾಡಬೆಟ್ಟುಗುತ್ತು, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀ ನಾರಾಯಣ ಶರ್ಮ, ಪ್ರಮುಖರಾದ ಪಿ.ಜಿನರಾಜ ಆರಿಗ, ಸತೀಶ್ ಕುಮಾರ್ ಜೈನ್ ಪಿಲಿಂಗಾಲು, ಭರತ್ ಕುಮಾರ್ ಜೈನ್ ಬಲ್ಲೋಡಿಗುತ್ತು, ಬಾಲಕೃಷ್ಣ ಅಂಚನ್, ಹಂಸರಾಜ ಜೈನ್ ಪುರಿಯ, ಸುರೇಂದ್ರ ಕುಮಾರ್ ಜೈನ್, ಶ್ರೇಯಾಂಶ ಜೈನ್, ರಂಜಿತ್ ಜೈನ್, ಅಮಿತ್ ಕುಮಾರ್, ರಾಜ್‌ಪ್ರಸಾದ್ ಆರಿಗ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net