ಮಾಸಾಂತ್ಯದಲ್ಲಿ ಕಂಬಳ

kambala new
Published on

ಮಂಗಳೂರು: ಕರಾವಳಿ ಭಾಗದ ಜಾನಪದ ಕ್ರೀಡೆ ಕಂಬಳವನ್ನು ಈ ಬಾರಿ ಕೋವಿಡ್ ಮಾರ್ಗಸೂಚಿಯೊಂದಿಗೆ ಆಯೋಜಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಸ್ತುತ ಸಾಲಿನ ಕಂಬಳ ಕ್ರೀಡೆಯನ್ನು ಜಿಲ್ಲೆಯಲ್ಲಿ ಆಯೋಜಿಸುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಬಾರಿ ಕೋವಿಡ್ ಸೋಂಕಿನಿಂದಾಗಿ ರೈತರು ಜನವರಿ ಅಂತ್ಯವಾದರೂ ಕಂಬಳ ಪ್ರಾರಂಭಿಸಿಲ್ಲ. ಆಯೋಜಕರು ಕೋವಿಡ್ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸುವುದರೊಂದಿಗೆ ಜನವರಿ 30ರಿಂದ ಕನಿಷ್ಠ 10 ಕಂಬಳ ಏರ್ಪಡಿಸಬಹುದು ಎಂದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ ಕೋವಿಡ್ ಸಂದರ್ಭ ಹಿನ್ನೆಲೆ ಅತಿ ಹೆಚ್ಚು ಜಾಗರೂಕತೆ ವಹಿಸಬೇಕು. ಹೆಚ್ಚು ಜನರು ಸೇರಿದಂತೆ ಕ್ರಮ ವಹಿಸಬೇಕು, ರಾತ್ರಿ ಹತ್ತು ಗಂಟೆ ಒಳಗಾಗಿ ಕಂಬಳ ಕಾರ್ಯಕ್ರಮ ಪೂರ್ಣಗೊಳಿಸಬೇಕು. ಕಾರ್ಯಕ್ರಮಕ್ಕೆ ವಯಸ್ಸಾದವರು ಮತ್ತು ಮಕ್ಕಳು ಭಾಗವಹಿಸದಂತೆ ಎಚ್ಚರ ವಹಿಸಬೇಕು, ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.

ಜಿಲ್ಲಾಡಳಿತ ವಿಧಿಸುವ ಎಲ್ಲ ನಿಯಮ ಹಾಗೂ ಮಾರ್ಗಸೂಚಿಗಳನ್ನು ಪಾಲಿಸಲು ಹೆಚ್ಚಿನ ಕಾರ್ಯಕರ್ತರನ್ನು ತೊಡಗಿಸಿಕೊಳ್ಳಲಾಗುವುದು ಎಂದು ಕಂಬಳ ಸಮಿತಿ ಪದಾಧಿಕಾರಿಗಳು ತಿಳಿಸಿದರು. ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ಶಾಸಕ ಯು.ಟಿ.ಖಾದರ್, ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಟಿ.ಜಿ.ಪ್ರಸನ್ನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net