ಕಂಬಳ ಮೇಲೆ ಕರೊನಾ ಕರಿನೆರಳು

KAMBALA F
Published on

ಭರತ್ ಶೆಟ್ಟಿಗಾರ್ ಮಂಗಳೂರು

ಎಲ್ಲ ಸರಿಯಾಗಿ ಇರುತ್ತಿದ್ದರೆ ಇಷ್ಟೊತ್ತಿಗಾಗಲೇ ಈ ಬಾರಿಯ ಕಂಬಳ ಋತುವಿನ ವೇಳಾಪಟ್ಟಿ ಬಿಡುಗಡೆಯಾಗಿ, ಉಭಯ ಜಿಲ್ಲೆಗಳ ಕಂಬಳ ಆಯೋಜಕರು ಭರದ ಸಿದ್ಧತೆ ಆರಂಭಿಸುತ್ತಿದ್ದರು. ಆದರೆ ಕರೊನಾ ಕರಾವಳಿಯ ಜನಪದ ಕ್ರೀಡೆಯ ಆಯೋಜನೆಗೂ ಅಡ್ಡಿಯಾಗಿದೆ.

ಪ್ರತಿವರ್ಷ ದ.ಕ-ಉಡುಪಿ ಜಿಲ್ಲಾ ಕಂಬಳ ಸಮಿತಿ ಸಭೆ ಅಕ್ಟೋಬರ್‌ನಲ್ಲಿ ನಡೆದು, ಕಂಬಳ ವೇಳಾಪಟ್ಟಿ ಬಿಡುಗಡೆಯಾಗುತ್ತಿತ್ತು. ನವೆಂಬರ್‌ನಿಂದ ಮಾರ್ಚ್/ಏಪ್ರಿಲ್‌ವರೆಗೆ ಪ್ರತಿ ಶನಿವಾರ ಮತ್ತು ಭಾನುವಾರ ಕೂಟ ಆಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ನಡೆಸಲು ಸಾಧ್ಯವೇ ಎನ್ನುವ ಪ್ರಶ್ನೆಗಳು ಸಮಿತಿಗೆ ಎದುರಾಗಿದೆ. ಪರಿಣಾಮ ಈ ವರೆಗೂ ಪೂರ್ವಭಾವಿ ಸಭೆ ನಡೆದಿಲ್ಲ.

ಜನವರಿ ಬಳಿಕ ಆಯೋಜನೆ?: ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುವ ಯಾವುದೇ ಕಾರ್ಯಕ್ರಮಗಳಿಗೆ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಆದ್ದರಿಂದ ಕಂಬಳಕ್ಕೂ ಸದ್ಯ ಜಿಲ್ಲಾಡಳಿತದಿಂದ ಅನುಮತಿ ಸಿಗುವುದು ಕಷ್ಟ ಎನ್ನುವುದು ಸಮಿತಿ ಅಭಿಪ್ರಾಯ. ನವೆಂಬರ್ ಮೊದಲ ವಾರ ಸಮಿತಿ ಸಭೆ ನಡೆಸಿ, ಅಭಿಪ್ರಾಯ ಪಡೆದು ಜಿಲ್ಲಾಡಳಿತದ ಮುಂದಿರಿಸಲಾಗುವುದು. ಜಿಲ್ಲಾಡಳಿತದ ತೀರ್ಮಾನ ಅನುಸರಿಸಿ ಮುಂದಿನ ನಡೆ ಇರಲಿದೆ. ಅನುಮತಿ ಸಿಕ್ಕರೆ ಜನವರಿ ತಿಂಗಳಿಂದ ಮಾರ್ಚ್ ವರೆಗೆ ಆಯ್ದ ಕೆಲವು ಕಂಬಳ ಆಯೋಜಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಇತರ ಕ್ರೀಡೆಗಳಂತಲ್ಲ ಕಂಬಳ: ಯಕ್ಷಗಾನಕ್ಕೆ ಅನುಮತಿ ಸಿಕ್ಕಿರುವುದರಿಂದ ಕಂಬಳಕ್ಕೂ ಅನುಮತಿ ನೀಡಿ ಎಂದು ಕೇಳಲು ಸಾಧ್ಯವಾಗುವುದಿಲ್ಲ. ಇತರ ಕ್ರೀಡೆಗಳ ಮಾದರಿಯಲ್ಲಿ ಜನರಿಗೆ ಅನುಮತಿ ನೀಡದೆ ಕಂಬಳ ಆಯೋಜಿಸಲು ಸಾಧ್ಯವಿಲ್ಲ. ಏಕೆಂದರೆ ಒಂದು ಕಂಬಳಕ್ಕೆ 100 ಜೋಡಿ ಕೋಣಗಳು ಬಂದರೆ ಅವುಗಳ ಜತೆ ಬರುವವರ ಸಂಖ್ಯೆ ಸಾವಿರ ಮೀರುತ್ತದೆ. ಪರಸ್ಪರ ಅಂತರ, ಮಾಸ್ಕ್ ಕಡ್ಡಾಯ ಎಂದು ಆಯೋಜಕರು ಹೇಳಿದರೂ ಜನರು ಕೇಳುವ ಪರಿಸ್ಥಿತಿ ಇಲ್ಲದಿದ್ದರೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದಂತಾಗುತ್ತದೆ. ಆದ್ದರಿಂದ ಜಿಲ್ಲಾಡಳಿತಗಳು ಸ್ಪಷ್ಟ ನೀತಿ ರೂಪಿಸಿ ಕಂಬಳಕ್ಕೆ ಅನುಮತಿ ನೀಡಿದರೆ ಉತ್ತಮ ಎನ್ನುತ್ತಾರೆ ಕಂಬಳ ಸಮಿತಿ ಸಲಹೆಗಾರ ವಿಜಯ್ ಕುಮಾರ್ ಕಂಗಿನಮನೆ.

ಓಟದ ಮೇಲೆ ಪರಿಣಾಮ: ಕಂಬಳದ ಕೋಣಗಳು ಓಟಕ್ಕೆಂದೇ ಇರುವಂತವುಗಳು. ಹಿಂದೆ ಆದರೆ ಗದ್ದೆಗಳಲ್ಲಿ ಉಳುಮೆಗೂ ಬಳಸುತ್ತಿದ್ದರಿಂದ ಹೆಚ್ಚಿನ ವ್ಯಾಯಾಮ ಸಿಗುತಿತ್ತು. ಪ್ರಸ್ತುತ ಉಳುಮೆಯಲ್ಲಿ ಕಂಬಳದ ಕೋಣಗಳನ್ನು ಬಳಸುವುದಿಲ್ಲ. ಹಾಗಾಗಿ ಒಂದು ವರ್ಷ ಕಂಬಳದಲ್ಲಿ ಭಾಗವಹಿಸದಿದ್ದರೆ ಅವುಗಳ ಓಟದ ಮೇಲೂ ಪರಿಣಾಮ ಬೀರುತ್ತದೆ. ಜತೆಗೆ ಈ ಬಾರಿ 200ರಷ್ಟು ಕಿರಿಯ ಕೋಣಗಳು ಕಂಬಳದಲ್ಲಿ ಭಾಗವಹಿಸಲು ಸಿದ್ಧವಾಗಿವೆ. ಅವುಗಳಿಗೂ ಕಂಬಳ ಅನುಭವ ಸಿಗುತ್ತಿತ್ತು. ಕಂಬಳ ರದ್ದಾದರೆ ಮತ್ತೆ ಒಂದು ವರ್ಷ ಕಾಯಬೇಕಾಗುತ್ತದೆ, ಕೋಣಗಳ ಕಾರ್ಯಕ್ಷಮತೆಯಲ್ಲೂ ವ್ಯತ್ಯಾಸವಾಗುತ್ತದೆ ಎನ್ನುವುದು ಕಂಬಳ ತಜ್ಞರ ಆತಂಕ.

ಸರ್ಕಾರದ ಮಾರ್ಗಸೂಚಿಯಂತೆ ಪ್ರಸ್ತುತ ಕಡಿಮೆ ಜನರು ಸೇರಿವಂತಹ ಕಾರ್ಯಕ್ರಮಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಕಂಬಳ ಸೀಮಿತ ಜನರು ಸೇರಿ ನಡೆಸಬಹುದಾದ ಕಾರ್ಯಕ್ರಮ ಅಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದ ಮಾರ್ಗಸೂಚಿ ಏನಿರುತ್ತದೋ ಅದನ್ನು ಅನುಸರಿಸಿ, ಕಂಬಳ ಸಮಿತಿಗಳ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. - ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯಾವ ರೀತಿ ಕಂಬಳ ಆಯೋಜಿಸಬೇಕು ಎನ್ನುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ದಸರಾ ಬಳಿಕ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಡಳಿತವನ್ನು ಭೇಟಿಯಾಗಿ ಅನುಮತಿ ಪಡೆಯಬೇಕು. ಸಾಧ್ಯವಾದರೆ ಜನವರಿ ಬಳಿಕ ಆಯೋಜಿಸಲಾಗುವುದು. ಆದರೆ ಎಲ್ಲ ಕಂಬಳ ಆಯೋಜಿಸುವುದು ಕಷ್ಟ. - ಪಿ.ಆರ್.ಶೆಟ್ಟಿ, ಅಧ್ಯಕ್ಷ, ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net