ಗುರುವಪ್ಪ ಪೂಜಾರಿ ಅಪಘಾತಕ್ಕೆ ಬಲಿ

guruvappa
Published on

ಗುರುಪುರ: ರಾಷ್ಟ್ರೀಯ ಹೆದ್ದಾರಿ 196ರ ಗುರುಪುರ ಸೇತುವೆಗೆ ಅನತಿ ದೂರದ ಕುಕ್ಕುದಕಟ್ಟೆಯಲ್ಲಿ ಭಾನುವಾರ ಸಾಯಂಕಾಲ ಕಾರು-ಸ್ಕೂಟಿ ಡಿಕ್ಕಿಯಾಗಿ ಗುರುಪುರ ನಿವಾಸಿ, ಕಂಬಳ ಕೋಣಗಳ ಯಜಮಾನ ಕೆದುಬರಿ ಗುರುವಪ್ಪ ಪೂಜಾರಿ(78) ಮೃತಪಟ್ಟಿದ್ದಾರೆ.

ಕುಕ್ಕುದಕಟ್ಟೆಯಲ್ಲಿರುವ ಡೇರಿಗೆ ಹಾಲು ನೀಡಲು ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಮಂಗಳೂರಿನಿಂದ ಗುರುಪುರದತ್ತ ಅತಿವೇಗದಿಂದ ಬಂದ ಸುಂಕದಕಟ್ಟೆಯ ವಕೀಲರೊಬ್ಬರ ಕಾರು ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಸ್ಕೂಟಿ ಅಪ್ಪಚ್ಚಿಯಾಗಿದ್ದು, ಗುರುವಪ್ಪ ರಸ್ತೆಗೆ ಅಪ್ಪಳಿಸಿದರು. ಅವರ ಕೈಯಲ್ಲಿದ್ದ ಹಾಲಿನ ಕ್ಯಾನ್ ರಸ್ತೆಯಿಂದ ಮಾರುದೂರ ಬಿದ್ದಿತು. ತಲೆ, ಕೈಕಾಲಿಗೆ ಗಂಭೀರ ಗಾಯವಾಗಿದ್ದ ಅವರನ್ನು ತಕ್ಷಣವೇ ಗುರುಪುರದ ಸೇವಾ ಬ್ರಿಗೇಡ್ ಆಂಬುಲೆನ್ಸ್‌ನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ದಾರಿಮಧ್ಯೆ ಅವರು ಕೊನೆಯುಸಿರೆಳೆದರು. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಂಬಳಗಳಲ್ಲಿ ಪದಕ: ಕೃಷಿಕರಾಗಿರುವ ಗುರುವಪ್ಪ ಪೂಜಾರಿ ಬಾಲ್ಯದಿಂದಲೇ ಕಂಬಳದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದು, ಕಂಬಳದ ಕೋಣ ಹೊಂದಿದ್ದಾರೆ. ಹಲವು ಕಂಬಳಗಳಲ್ಲಿ ಪದಕ ಗಳಿಸಿರುವ ಅವರು ಇತ್ತೀಚಿನ ಕೆಲ ವರ್ಷಗಳಿಂದ ಕೃಷಿಯೊಂದಿಗೆ ಹೈನುಗಾರಿಕೆ ನಡೆಸುತ್ತಿದ್ದರು. ಅವರನ್ನು ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ. ಅವರು ಮೂವರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net