ಸಾಂಸ್ಕೃತಿಕ ಪ್ರವಾಸೋದ್ಯಮಕ್ಕಾಗಿ ಕಂಬಳ ಉತ್ಸವ

KAMBALA F
Published on

ಮಂಗಳೂರು: ಕರಾವಳಿಯ ಸಂಸ್ಕೃತಿ ವಿಶ್ವವ್ಯಾಪಿಯಾಗಿ ಪ್ರವಾಸಿಗರನ್ನು ಆಕರ್ಷಿಸಲು ಕಂಬಳಕ್ಕೆ ಉತ್ಸವದ ರೂಪ ನೀಡಬೇಕು, ಪ್ರತ್ಯೇಕ ಪ್ರಾಧಿಕಾರ ರಚನೆ, ಕೋಣಗಳ ತಳಿ ಸಂರಕ್ಷಣಾ ಕೇಂದ್ರ, ತರಬೇತಿ ಕೇಂದ್ರ ಸಹಿತ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು, ಇದಕ್ಕಾಗಿ ಕೇಂದ್ರ-ರಾಜ್ಯ ಸರ್ಕಾರಗಳು 10 ಕೋಟಿ ರೂ. ಅನುದಾನ ನೀಡಬೇಕೆಂಬ ಎಂಬ ವಿಸ್ತೃತ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡು ಜಿಲ್ಲಾಧಿಕಾರಿಗಳು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ಕಂಬಳ ಸಮಿತಿ-ಆಯೋಜಕರೊಂದಿಗೆ ಸಮಾಲೋಚನೆ ನಡೆಸಿದ್ದ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಪ್ರಾಂತೀಯ ಅಧ್ಯಕ್ಷ ಡಾ.ಎಸ್.ಕೆ.ಮಿತ್ತಲ್ ಈ ವರದಿ ತಯಾರಿಸಿದ್ದಾರೆ.

ಪ್ರಸಕ್ತ ನವೆಂಬರ್‌ನಿಂದ ಮಾರ್ಚ್‌ವರೆಗೆ ವರ್ಷಕ್ಕೆ 18ರಿಂದ 20ರಷ್ಟು ಆಧುನಿಕ ಕಂಬಳಗಳು ಶನಿವಾರ-ಭಾನುವಾರ ದ.ಕ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದಲ್ಲದೆ ಸಾಂಪ್ರದಾಯಿಕವಾಗಿ ಹತ್ತಾರು ಕಂಬಳಗಳು ನಡೆಯುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಕಂಬಳದ ಆಕರ್ಷಣೆ ದೇಶವಿದೇಶಗಳಲ್ಲೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಉತ್ಸವದ ರೂಪ ನೀಡಬೇಕು. ವಾರಾಂತ್ಯದ ಈ ಉತ್ಸವಗಳಿಗೆ ದೇಶ-ವಿದೇಶಗಳಲ್ಲಿ ಪ್ರಚಾರ ಕೈಗೊಂಡು, ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಬೇಕು. ಸರ್ಕಾರ ಮತ್ತು ಕಂಬಳ ಸಮಿತಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂಬುದು ವರದಿಯ ಮುಖ್ಯಾಂಶ.

ಅವಿಭಜಿತ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ ಹಾಗೂ ಆಯೋಜಕರು ಪೂರಕ ಮಾಹಿತಿಗಳನ್ನು ಒದಗಿಸಿದ್ದಾರೆ ಎಂದು ತೀರ್ಪುಗಾರ ವಿಜಯಕುಮಾರ್ ಕಂಗಿನಮನೆ ತಿಳಿಸಿದ್ದಾರೆ.

ಪ್ರಾಧಿಕಾರ/ಅಕಾಡೆಮಿ: ಪ್ರಸಕ್ತ ಸರ್ಕಾರದಿಂದ ನೇರವಾಗಿ ಕಂಬಳಕ್ಕೆ ಅನುದಾನ ವ್ಯವಸ್ಥಿತವಾಗಿ ಬರುತ್ತಿಲ್ಲ. ಸಮಿತಿಗಳೂ ಅಧಿಕಾರಯುತವಾಗಿಲ್ಲ. ಈ ನಿಟ್ಟಿನಲ್ಲಿ ಕಂಬಳದ ಅಭಿವೃದ್ಧಿಗಾಗಿ ಸರ್ಕಾರ ಅಕಾಡೆಮಿ ಅಥವಾ ಪ್ರಾಧಿಕಾರ ರಚಿಸಬೇಕು ಹಾಗೂ ಈಗಿನ ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯ ಬದಲು ಜಿಲ್ಲೆಗೊಂದು ಸಮಿತಿ ಹಾಗೂ ಕೇಂದ್ರ ಸಮಿತಿಯಾಗಿ ಒಕ್ಕೂಟ ರಚಿಸಬೇಕೆಂಬುದನ್ನು ವರದಿಯಲ್ಲಿ ತಿಳಿಸಲಾಗಿದೆ.

4 ತರಬೇತಿ ಕೇಂದ್ರ: ದ.ಕ. ಜಿಲ್ಲೆಯ ಮೂಡುಬಿದಿರೆ, ಉಡುಪಿ ಜಿಲ್ಲೆಯ ಮಿಯ್ಯರು, ಬೈಂದೂರು, ಕಾಸರಗೋಡು ಜಿಲ್ಲೆಯ ಪೈವಳಿಕೆಯಲ್ಲಿ ಕಂಬಳ ಓಟಗಾರರ ಕ್ರೀಡಾ ತರಬೇತಿ ಕೇಂದ್ರ ಸ್ಥಾಪಿಸಬೇಕು. ಕಂಬಳ ಓಟಗಾರರು ಮತ್ತು ಕೋಣಗಳಿಗೆ 19 ಫಿಟ್ನೆಸ್ ತರಬೇತಿ ಕೇಂದ್ರ ತೆರೆಯಬೇಕು ಎಂದೂ ಶಿಫಾರಸು ಮಾಡಲಾಗಿದೆ. ಕಂಬಳ ಓಟಗಾರರಿಗೆ ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಾವಕಾಶ, ಕ್ರೀಡೆ/ಶೌರ್ಯ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಉಚಿತ ಬಸ್ ಪಾಸ್, ಓಟಗಾರರ ಮಕ್ಕಳಿಗೆ ವಿದ್ಯಾರ್ಥಿವೇತನ, ಕುಟುಂಬಕ್ಕೆ ಪಿಂಚಣಿ, ವಿಮೆ, ಕ್ರೀಡೆ/ಅಥ್ಲೆಟಿಕ್ಸ್ ತರಬೇತಿ, ಸಾಹಸ ಕ್ರೀಡೆಗಳಲ್ಲಿ ತರಬೇತುದಾರರಾಗಿ ನೇಮಕ ಮತ್ತಿತರ ಅಂಶಗಳನ್ನೂ ಪ್ರಸ್ತಾಪಿಸಲಾಗಿದೆ.

ಗೋಶಾಲೆ ರೀತಿಯ ಕೇಂದ್ರ: ವಯಸ್ಸಾದ ಕೋಣಗಳಿಗೆ ಆಶ್ರಯ, ತಳಿ ಸಂರಕ್ಷಣೆ, ಸಂತಾನೋತ್ಪತ್ತಿ, ಮತ್ತು ಅಭಿವೃದ್ಧಿಗೆ ಪೂರ್ಣ ಪ್ರಮಾಣದ ಸೌಲಭ್ಯಗಳನ್ನೊಳಗೊಂಡ ಗೋಶಾಲೆ ಮಾದರಿಯ ಕೇಂದ್ರ ಸ್ಥಾಪಿಸಬೇಕು. ನದಿತಟದಲ್ಲಿ 25 ಎಕರೆ ಹಸಿರು ಭೂಮಿ ನೀಡಿದಲ್ಲಿ, ಅಲ್ಲಿ 10 ಸಾವಿರ ಚದರ ಅಡಿಯ ವ್ಯವಸ್ಥಿತ ಶೆಡ್ ಸಹಿತ ಕಟ್ಟಡಗಳನ್ನು ನಿರ್ಮಿಸಬಹುದು. ಔಷಧೀಯ ಸಸ್ಯಗಳ ತೋಟ ನಿರ್ಮಾಣಕ್ಕೆ 5 ಎಕರೆ ಮೀಸಲಿಡಬೇಕು ಎಂಬುದೂ ವರದಿಯಲ್ಲಿದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net