

ಹಿರೀಸಾವೆ : ಹೋಬಳಿಯ ಬೆಳಗೀಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಕಂಬದ ನರಸಿಂಹಸ್ವಾಮಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ರಾತ್ರಿ ವಿಜೃಂಭಣೆಯಿಂದ ಜರುಗಿತು.
ಕಳೆದ ಒಂದು ವಾರದಿಂದ ಈ ರಂಗದ ಹಬ್ಬವನ್ನು ಭಕ್ತಿಭಾವದಿಂದ ಆಚರಣೆ ಮಾಡಲಾಗುತ್ತಿದೆ. ಹಬ್ಬದ ಕೊನೆಯ ದಿನವಾದ ಭಾನುವಾರ ದೇವರನ್ನು ಒಡವೆ-ವಸ್ತ್ರಗಳಿಂದ ಅಲಂಕರಿಸಲಾಗಿತ್ತು. ನಂತರ ಭಕ್ತರು ವೇದಘೋಷಣೆಗಳು ಮತ್ತು ಮಂಗಳವಾದ್ಯಗಳೊಂದಿಗೆ ಉತ್ಸವವು ಪ್ರಾರಂಭವಾಯಿತು. ಗ್ರಾಮದ ಮಧ್ಯದಲ್ಲಿರುವ ರಂಗ ಮಂಟಪ್ಪದ ಸುತ್ತುವರಿದಂತೆ ಭಕ್ತರು ರಂಗ ಕುಣಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗೋವಿಂದನ ನಾಮಸ್ಮರಣೆಯೊಂದಿಗೆ ಮಂಗಳವಾದ್ಯ, ವೀರಗಾಸೆ ಕುಣಿತದೊಂದಿಗೆ ರಥೋತ್ಸವವು ಸಾಗಿತು.
ರಥವು ಸಾಗಿದಂತೆಲ್ಲ ಭಕ್ತರು ಬಾಳೆಹಣ್ಣು ಹಾಗೂ ದವನವನ್ನು ಎಸೆಯುವ ಮೂಲಕ ಪುನೀತರಾದರು. ರಥೋತ್ಸವದ ನಂತರ ಮೂಡಲಗಿರಿಯಪ್ಪನ ಹರಿಸೇವೆಯ ಕಾರ್ಯಕ್ರಮ ನಡೆಯಿತು. ಭಕ್ತರು 101 ಎಡೆಯನ್ನು ದೇವರಿಗೆ ಅರ್ಪಿಸಿದರು. ದೇವಸ್ಥಾನದ ಆವರಣದಲ್ಲಿ ಸಾಮೂಹಿಕವಾಗಿ ಅಡುಗೆ ತಯಾರಿಸಿ, ಅನ್ನದಾನ ಮಾಡಲಾಯಿತು.
ಶನಿವಾರ ಸಂಜೆ ಭಕ್ತರು ಬಾಯಿ ಬೀಗದ ಹರಕೆಯನ್ನು ಸ್ವಾಮಿಗೆ ಸಲ್ಲಿಸಿದರು. ಜಾಗರಣೆ ಪ್ರಯುಕ್ತ ಶುಕ್ರವಾರ ರಾತ್ರಿ ಹೊನ್ನೇನಹಳ್ಳಿ ಗ್ರಾಮಮಸ್ಥರು ರಂಗ ಕುಣಿತ ಕುಣಿದರು. ಅತ್ತಿಹಳ್ಳಿಯ ಮಹಿಳೆಯರ ತಂಡ ಕೋಲಾಟ ನಡೆಸಿಕೊಟ್ಟರು. ಸುತ್ತಮುತ್ತಲ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.