

ಕಮತಗಿ: ಸ್ಥಳೀಯ ಪಟ್ಟಣ ಪಂಚಾಯಿತಿಯ 30 ತಿಂಗಳ ಅವಧಿಗೆ ಅಧ್ಯಕ್ಷರಾಗಿ ರಮೇಶ ಜಮಖಂಡಿ, ಉಪಾಧ್ಯಕ್ಷರಾಗಿ ನೇತ್ರಾವತಿ ನಿಂಬಲಗುಂದಿ ಅವಿರೋಧ ಆಯ್ಕೆಯಾಗಿದ್ದು, ಪಪಂ ಆಡಳಿತ ಕಾಂಗ್ರೆಸ್ ಪಾಲಾಗಿದೆ.
ಬುಧವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರಮೇಶ ಜಮಖಂಡಿ, ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನೇತ್ರಾವತಿ ನಿಂಬಲಗುಂದಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನೇ ಅವಿರೋಧ ಆಯ್ಕೆ ಮಾಡಿ ಹುನಗುಂದ ತಹಸೀಲ್ದಾರ್, ಚುನಾವಣಾಧಿಕಾರಿ ನಿಂಗಪ್ಪ ಬಿರಾದಾರ ಘೋಷಿಸಿದರು.
ಶಾಸಕ ಎಚ್.ವೈ. ಮೇಟಿ, ಪಪಂ ಸದಸ್ಯರಾದ ಹುಚ್ಚಪ್ಪ ಹಗೇದಾಳ, ಲಕ್ಷ್ಮಣ ಮಾದರ, ಗುರುಲಿಂಗಪ್ಪ ಪಾಟೀಲ, ಬಸವರಾಜ ಕುಂಬಳಾವತಿ, ದೇವಿಪ್ರಸಾದ ನಿಂಬಲಗುಂದಿ, ನಂದಾ ದ್ಯಾಮಣ್ಣವರ, ಸುಮಿತ್ರಾ ಲಮಾಣಿ, ಮಂಜುಳಾ ಮುರಾಳ, ಕಸ್ತೂರಿಬಾಯಿ ಬಾಗೇವಾಡಿ, ಚಂದಪ್ಪ ಕುರಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ವಾರ್ಡ್ ನಂ.16ರ ಸದಸ್ಯ ಚಂದಪ್ಪ ಕುರಿ ಅವರು ಹಸಿರು ಟವಲ್ ಧರಿಸಿ ಚುನಾವಣೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮುರುಗೇಶ ಕಡ್ಲಿಮಟ್ಟಿ, ಪಪಂ ಮಾಜಿ ಅಧ್ಯಕ್ಷ ಮಹಾಂತೇಶ ಅಂಗಡಿ, ಮಾಜಿ ಸದಸ್ಯರಾದ ಹುಚ್ಚಪ್ಪ ಸಿಂಹಾಸನ, ಸಿದ್ದು ಹೊಸಮನಿ, ರಮೇಶ ಲಮಾಣಿ, ಕಾಂಗ್ರೆಸ್ ಮುಖಂಡರಾದ ಶಂಕರಲಿಂಗಪ್ಪ ಮಂಕಣಿ, ಯಲ್ಲಪ್ಪ ವಡ್ಡರ, ನಾಗೇಶ ಹುಲ್ಲೂರ, ವಿದ್ಯಾಧರ ಮಳ್ಳಿ, ನಭಿ ತಹಶೀಲ್ದಾರ್, ಅನಿಲ ಹುಚ್ಚೇಶ್ವರಮಠ, ಗೋಪಾಲಪ್ಪ ವಣಕಿ, ಮಲ್ಲಪ್ಪ ರೂಗಿ, ಶ್ರೀಕಾಂತ ಹಾಸಲಕರ ಇತರರಿದ್ದರು.
ವಿಜಯೋತ್ಸವ: ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಪಂ ಕಾರ್ಯಾಲಯದ ಎದುರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲ ಎರಚಿ ಸಂಭ್ರಮಿಸಿದರಲ್ಲದೆ, ನೂತನ ಅಧ್ಯಕ್ಷ- ಉಪಾಧ್ಯಕ್ಷರು ಪಟ್ಟಣದ ಪ್ರಮುಖ ದೇವಸ್ಥಾನಗಳಿಗೆ ತೆರಳಿ ದೇವರ ಆಶೀರ್ವಾದ ಪಡೆದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಿಂದ ಬಿಜೆಪಿ ಬೆಂಬಲಿತ ಸದಸ್ಯರಾದ ಪ್ರಕಾಶ ಸಿನ್ನೂರ, ಸಂಗಪ್ಪ ಗಾಣಿಗೇರ, ಹುಚ್ಚೇಶ ಮದ್ಲಿ, ರತ್ನಾ ತಳಗೇರಿ ಚುನಾವಣೆಯಿಂದ ದೂರ ಉಳಿದಿದ್ದರು. ಒಟ್ಟು 16 ಜನ ಸದಸ್ಯರಲ್ಲಿ ಕಾಂಗ್ರೆಸ್ 12 ಹಾಗೂ ಬಿಜೆಪಿ 4 ಜನ ಸದಸ್ಯರ ಬಲ ಹೊಂದಿದೆ.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪಟ್ಟಣದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿ ಅಭಿವೃದ್ಧಿ ಹೊಂದಿದ ಪಟ್ಟಣವನ್ನಾಗಿಸಲು ಶಾಸಕ ಎಚ್.ವೈ. ಮೇಟಿ ಅವರೊಂದಿಗೆ ಹೆಗಲಿಗೆ ಹೆಗಲುಕೊಟ್ಟು ಕೆಲಸ ಮಾಡುವೆ.
ರಮೇಶ ಎಸ್. ಜಮಖಂಡಿ ನೂತನ ಅಧ್ಯಕ್ಷರು, ಪ.ಪಂ. ಕಮತಗಿ