ಜಿಲ್ಲೆಯ ವಿವಿಧೆಡೆ ಕಮಲೋತ್ಸಾಹ

Kamalotsaha in different parts of the district
ಗೆಲುವು ಖಚಿತವಾಗುತ್ತಿದ್ದಂತೆ ಬಾಗಲಕೋಟೆ ನಗರದ ತೋವಿವಿ ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಗೆಲುವಿನ ನಗೆ ಬೀರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹನುಮಂತ ಮಾವಿನಮರದ, ಮುಖಂಡರಾದ ಶರಣಪ್ಪ ಗುಳೇದ, ಬಸವರಾಜ ಯಂಕಂಚಿ, ಅಶೋಕ ಲಿಂಬಾವಳಿ ಇತರರು ಇದ್ದರು.
Published on

ಬಾಗಲಕೋಟೆ: ಬಿಜೆಪಿ ಬಾಗಲಕೋಟೆ ಮತಕ್ಷೇತ್ರದಲ್ಲಿ ಐದನೇ ಬಾರಿಗೆ ಗೆದ್ದು ಬೀಗಿದೆ. ಕಮಲ ಪಾಳಯದಲ್ಲಿ ಸಂಭ್ರಮ, ಸಡಗರ ಮನೆ ಮಾಡಿದೆ. ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಸಪ್ಪೆಯಾಗಿದ್ದ ಲೋಕಸಭೆ ಗೆಲುವು ಬಿಜೆಪಿಗೆ ಟಾನಿಕ್ ನೀಡಿದಂತಾಗಿದೆ.

ಕೋಟೆನಾಡಿನಲ್ಲಿ ಮಂಗಳವಾರ ಮೊಳಗಿದ ಚಾರ್ ಸೋ ಪಾರ್ ಘೋಷಣೆಗಳಿಗೆ 2024 ರ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಚುನಾವಣೆ ಲಿತಾಂಶ ಸಾಕ್ಷೀಕರಿಸಿತು. ಚಿಕ್ಕಮಕ್ಕಳಿಂದ ಹಿಡಿದು ಯುವಕರ ಬಾಯಲ್ಲಿ ಗುಂಯ್‌ಗುಡುತ್ತಿದ್ದ ಈ ಘೋಷಣೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಅವರ ಕೊರಳಿಗೆ ಐದನೇ ಬಾರಿಗೆ ಜಯಮಾಲೆ ಬೀಳುವವರೆಗೂ ಬಿಡಲೇ ಇಲ್ಲ. ಬೆಳಗ್ಗೆ 8 ಗಂಟೆಗೆ ಸ್ಟ್ರಾಂಗ್ ರೂಮ್‌ನಿಂದ ಮತಪೆಟ್ಟಿಗೆಗಳನ್ನು ಹೊರತಂದು ಸಿಬ್ಬಂದಿ ಎಣಿಕೆ ಕಾರ್ಯ ಆರಂಭಿಸುತ್ತಿದ್ದಂತೆ ಆರಂಭದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ಮೆಗಾ ಫೈಟ್ ಏರ್ಪಟ್ಟಿತ್ತು. ಆರಂಭದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರಿಗೆ 6 -7 ಸುತ್ತು ಆರಂಭವಾಗುತ್ತಿದ್ದಂತೆ ಹಿನ್ನಡೆ ಆರಂಭವಾಯಿತು. ನಂತರ ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ.ಗದ್ದಿಗೌಡರ ಲೀಡ್ ಕಾಯ್ದುಕೊಂಡರು.

ಕೆಲವು ಸುತ್ತಿನಲ್ಲಿ ಹಾವು ಏಣಿ ಆಟ ಮುಂದುವರಿದಿತ್ತು. ಕೆಲವು ಮತಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡರೆ ಹಲವು ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತು. ಅಲ್ಪಮತದ ಹೊಯ್ದಟ ಮುಂದುವರಿದಿತ್ತು. ಬಿಜೆಪಿ 20 ಸಾವಿರ ಲೀಡ್ ದಾಟುತ್ತಿದ್ದಂತೆ ಕಾಂಗ್ರೆಸ್ ನಿರೀಕ್ಷೆ ಹುಸಿಗೊಳ್ಳುತ್ತಾ ಹೋಯಿತು. ಸಂಸದ ಪಿ.ಸಿ.ಗದ್ದಿಗೌಡರಿಗೆ ಹಿನ್ನಡೆಯಾಗಲಿಲ್ಲ. ನಿರಂತರವಾಗಿ ಲೀಡ್ ಮುಂದುವರಿಯಿತು. ಕೊನೆ ಕ್ಷಣದವರೆಗೂ ಮುನ್ನಡೆ ಕಾಯ್ದುಕೊಂಡು ಗೆಲುವಿನ ಆಟ ಮುಕ್ತಾಯಗೊಳಿಸಿದರು. ಸೋಲಿನ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರಿಗೆ ಶುಭ ಹಾರೈಸಿದರು.

ಭರ್ಜರಿ ವಿಜಯೋತ್ಸವ

ಸಂಸದ, ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗೆಲುವಿನ ಸೂಚನೆ ಸಿಗುತ್ತಿದ್ದಂತೆ ಬಾಗಲಕೋಟೆ ಲೋಕಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಕಾಯಕರ್ತರು, ಮುಖಂಡರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಮತ ಎಣಿಕೆ ಕೇಂದ್ರ ಬಾಗಲಕೋಟೆ ತೋವಿವಿ ಎದುರು ನೆರೆದಿದ್ದ ಸಾವಿರಾರು ಸಂಖ್ಯೆ ಬಿಜೆಪಿ ಕಾಯಕರ್ತರು, ಗದ್ದಿಗೌಡರ ಮುನ್ನಡೆ ಸಾಧಿಸುತ್ತಿದ್ದಂತೆ ಪರಸ್ಪರ ಬಿಗಿದಪ್ಪಿ ಗೆಲುವು ನಮ್ಮದೇ ಎಂದು ಸಂಭ್ರಮಿಸಿದರು. ಬಿಜೆಪಿ ಬಾವುಟ, ಮೋದಿ ಫೋಟೋ ಹಿಡಿದು ಜೈಕಾರ ಹಾಕಿದರು. ಬಾಗಲಕೋಟೆ ನಗರದ ವಿದ್ಯಾಗಿರಿ, ನವನಗರ, ಕಾಲೇಜು ರಸ್ತೆ, ಎಂ. ಜಿ. ರಸ್ತೆ, ಬಸವೇಶ್ವರ ವೃತ್ತ ಸೇರಿ ಜಿಲ್ಲೆಯ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗಲ್ಲಿ ಗಲ್ಲಿಗಳಲ್ಲಿ ಯುವಕರು ಬೈಕ್ ರ‌್ಯಾಲಿ ನಡೆಸಿ ಸಂಭ್ರಮಿಸಿದರು. ವಿವಿಧ ಸಿಹಿ ತಿನಿಸುಗಳನ್ನು ಕೊಟ್ಟು ಬಿಜೆಪಿಗೆ ಮತ ನೀಡಿದ್ದಕ್ಕೆ ಸಾರ್ವಜನಿಕರಿಗೆ ಕಾರ್ಯಕರ್ತರು, ನಾಯಕರು, ಮೋದಿ ಅಭಿಮಾನಿಗಳು ಧನ್ಯವಾದ ಅರ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net