ಕಮಲಾ ವ್ಯಕ್ತಿತ್ವ ಎಲ್ಲರಿಗೂ ಮಾದರಿ

0
ತುಮಕೂರು ವಿವಿ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಆಯೋಜಿಸಿದ್ದ ನಾಡೋಜ ಪ್ರೊ. ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮವನ್ನು ಹಂ.ಪ.ನಾಗರಾಜಯ್ಯ ಉದ್ಘಾಟಿಸಿದರು. ಪ್ರೊ.ಎಂ.ವೆಂಕಟೇಶ್ವರಲು, ಪ್ರೊ.ಮಲ್ಲಿಕಾ ಘಂಟಿ, ಡಾ.ಕೆ.ಆರ್​.ಸಂಧ್ಯಾರೆಡ್ಡಿ, ನಾಹಿದಾ ಜಮ್​ ಜಮ್​, ಪ್ರೊ.ಕೆ.ಪ್ರಸನ್ನಕುಮಾರ್​, ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಡಾ.ಗೀತಾ ವಸಂತ ಇದ್ದರು.
Published on

ವಿಜಯವಾಣಿ ಸುದ್ದಿಜಾಲ ತುಮಕೂರು

ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟವಾದ, ಮೌಲಿಕವಾದ ಗಟ್ಟಿ ಬರೆವಣಿಗೆ ನೀಡಿದ ಕಮಲಾ ಹಂಪನಾ ಅವರ ಬದುಕು, ಪರಿಶುದ್ಧ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎಂದು ನಾಡೋಜ ಹಂ.ಪ. ನಾಗರಾಜಯ್ಯ ಹೇಳಿದರು.

ವಿವಿಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಶನಿವಾರ ಆಯೋಜಿಸಿದ್ದ ನಾಡೋಜ ಪ್ರೊ.ಕಮಲಾ ಹಂಪನಾ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಮಲಾ ಹಂಪನಾ ಅವರು 6 ವರ್ಷ ಸಹಪಾಠಿಯಾಗಿ, 61 ವರ್ಷ ಸಹಧರ್ಮಿಣಿಯಾಗಿ ದಾಂಪತ್ಯ ಜೀವನದಲ್ಲಿ ಜತೆಯಾದರು. ಸಾಹಿತ್ಯ ಪಯಣದಲ್ಲಿ ವಿರಳವಾಗಿರುವ ಸಂಶೋಧನಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ವಾಗ್ಮಿತೆಯ ದೃಷ್ಟಿಯಿಂದ ಪ್ರಬುದ್ಧ ವಿಷಯಗಳನ್ನು ಪ್ರಸ್ತಾಪಿಸಿ, ಸಂಶೋಧನೆ ನಡೆಸಿದರು. ಅವರ ಕಥೆಗಳು, ಕವನಗಳು, ವಚನಗಳು ವಿಮರ್ಶಾತ್ಮಕ ದೃಷ್ಟಿಯಿಂದ ಕೂಡಿವೆ ಎಂದು ತಿಳಿಸಿದರು.

ಸಮಕಾಲೀನ ಸಂದರ್ಭದ ಸಾಕ್ಷಿಪ್ರಜ್ಞೆಯ ಕಮಲಾ ಹಂಪನಾ ಅವರು, ಕ್ರೂರ ಸಮಾಜದಲ್ಲಿ ಸಾಮಾಜಿಕ ಹೊಣೆಗಾರಿಕೆ ಹೊತ್ತು, ಶಿಕ್ಷಣದ ಮೂಲಕ ಸಮಾಜದ ಅನಿಷ್ಟ ಕಟ್ಟುಪಾಡುಗಳಿಂದ ಮುಕ್ತವಾಗಲು ಹೋರಾಡಿದರು. ಸ್ತ್ರೀ ಸಂವೇದನೆ ಕಥೆಗಳನ್ನು, ಬಂಡಾಯದ ಕವನಗಳನ್ನು ಬರೆದರು. ಈಗಿನ ಸಾಹಿತ್ಯಲೋಕ ಕೆಸರುಗದ್ದೆಯಾಗಿದೆ ಎಂಬ ಅಸಮಾಧಾನ ಅವರಿಗಿತ್ತು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ಹೇಳಿದರು.

ಕಮಲಾ ಹಂಪನಾ ಅವರ ವ್ಯಕ್ತಿತ್ವದ ಪ್ರಭಾವ ಸಕಾರಾತ್ಮಕವಾಗಿ ಅವರ ಸಂಗಡಿಗರ ಮೇಲೆ ಪರಿಣಾಮ ಬೀರಿತು. 18 ಸಂಪುಟಗಳ ಅವರ ಆತ್ಮಚರಿತ್ರೆಯಲ್ಲಿ ವಾಸ್ತವ ಸತ್ಯಗಳಿವೆ. 60 ವರ್ಷಗಳು ಸುದೀರ್ಘ ಸಾಹಿತ್ಯ ಸೇವೆ ಸಲ್ಲಿಸಿದರು. ಅನುಭವಕ್ಕೆ ದಕ್ಕಿದ ವಸ್ತುವಿನಿಂದ ಬರಹದಲ್ಲಿ, ಭಾಷಣದಲ್ಲಿ ಪ್ರಭುತ್ವ ಸಾಧಿಸಿದರು ಎಂದರು.

ಸಾಹಿತ್ಯಲೋಕದ ಮಿನುಗುತಾರೆ ಕಮಲಾ ಹಂಪನಾ ಅವರನ್ನು ಕಳೆದುಕೊಂಡಿದ್ದೇವೆ. ಅವರ ಕಾರ್ಯಗಳು ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿವೆ. ಜೈನ ಸಮುದಾಯದ ಕುರಿತು ಸಂಶೋಧನೆ ನಡೆಸಿ, ಸಂಪುಟಗಳನ್ನು ಪ್ರಕಟಿಸುವುದರಲ್ಲಿ ಅಗ್ರಗಣ್ಯರು ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ತಿಳಿಸಿದರು.

ಜಾನಪದ ತಜ್ಞೆ ಡಾ.ಕೆ.ಆರ್​.ಸಂಧ್ಯಾರೆಡ್ಡಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಾಹಿತ್ಯಾಭ್ಯಾಸ ಮಾಡುವ ಏಕೈಕ ಗುರಿ ಕಮಲಾ ಹಂಪನಾ ಅವರಿಗಿತ್ತು. ಕನ್ನಡಕ್ಕಾಗಿ ಯಾರನ್ನಾದರೂ ಎದುರು ಹಾಕಿಕೊಳ್ಳುವಂಥ ಧೈರ್ಯಗಾತಿ ಎಂದು ಬಣ್ಣಿಸಿದರು.

ಕಾರ್ಯಕ್ರಮದ ಸಂಯೋಜಕಿ ಡಾ.ಗೀತಾ ವಸಂತ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ವಿವಿ ಕುಲಸಚಿವೆ ನಾಹಿದಾ ಜಮ್​ ಜಮ್​, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್​, ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ನಿತ್ಯಾನಂದ ಬಿ.ಶೆಟ್ಟಿ ಉಪಸ್ಥಿತರಿದ್ದರು.

ಹಂಪನಾ ದತ್ತಿನಿಧಿ ನಾಡೋಜ ಪ್ರೊ.ಕಮಲಾ ಹಂಪನಾ ಅವರ ಕುಟುಂಬದವರಿಂದ ತುಮಕೂರು ವಿಶ್ವವಿದ್ಯಾಲಯಕ್ಕೆ "ಕಮಲಾ ಹಂಪನಾ' ದತ್ತಿನಿಧಿ ಸಮರ್ಪಣೆಯಾಗಿ 5 ಲಕ್ಷ ರೂ.,ಗಳ ಶಾಶ್ವತ ನಿಧಿ ಮತ್ತು ಡಿವಿಜಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರತಿ ವರ್ಷ ಪ್ರಥಮ ರ್ಯಾಂಕ್​ ಪಡೆಯುವ ವಿದ್ಯಾರ್ಥಿಗೆ ಚಿನ್ನದ ಪದಕ ನೀಡುವ ಸಲುವಾಗಿ ನಿಧಿ ಸ್ಥಾಪನೆಯ ಚೆಕ್​ಗಳನ್ನು ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಹಾಗೂ ಪ್ರೊ.ಕೆ.ಪ್ರಸನ್ನಕುಮಾರ್​ ಅವರಿಗೆ ಶನಿವಾರ ಹಂ.ಪ.ನಾಗರಾಜಯ್ಯ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net