ಕಮಲಾಕ್ಷಿ ಸೊಸೈಟಿ ವಿರುದ್ಧ 100 ಕೋಟಿ ರೂ. ವಂಚನೆ ಆರೋಪ

udp-19-protest 1
Published on

ಉಡುಪಿ: ಕಮಲಾಕ್ಷಿ ವಿವಿದೋದ್ದೇಶ ಸಹಕಾರ ಸಂಘ ಠೇವಣಿದಾರರಿಗೆ ಬಡ್ಡಿ ಹಾಗೂ ಠೇವಣಿ ಹಣವನ್ನು ವಾಪಸು ನೀಡದೆ 100 ಕೋಟಿ ರೂ. ಅಧಿಕ ಹಣ ವಂಚನೆ ಎಸಗಿದೆ. ಹೀಗಾಗಿ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಗ್ರಾಹಕರು ಸೊಸೈಟಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಂಸ್ಕೃತ ಕಾಲೇಜಿನ ಮುಂಭಾಗದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಕಮಲಾಕ್ಷ ವಿವಿಧೋದ್ದೇಶ ಸಹಕಾರ ಸಂಘವನ್ನು 2 ವರ್ಷದ ಹಿಂದೆ ಬಿ.ವಿ.ಲಕ್ಷ್ಮೀನಾರಾಯಣ ಎಂಬವರು ಸ್ಥಾಪಿಸಿದ್ದು, ನಿರಖು ಠೇವಣಿಗೆ ಶೇ. 12ರ ಬಡ್ಡಿ ಆಸೆ ತೋರಿಸಿ ಅನೇಕ ಜನರಿಂದ ನೂರಾರು ಕೋಟಿ ರೂ. ಹಣ ಸಂಗ್ರಹಿಸಿದ್ದರು. ಜೂನ್ ತಿಂಗಳವರೆಗೆ ಸರಿಯಾಗಿ ಬಡ್ಡಿ ಪಾವತಿಸಲಾಗಿದ್ದು, ನಂತರ ಬಡ್ಡಿಯನ್ನೂ ನೀಡಿಲ್ಲ. ವಾಯಿದೆ ಮುಗಿದ ನಿರಖು ಠೇವಣಿ ಮೊತ್ತವನ್ನು ವಾಪಾಸು ಕೇಳಿದಾಗ ಬ್ಯಾಂಕ್‌ನಲ್ಲಿ ದುಡ್ಡು ಇಲ್ಲದಿರುವುದು ಗ್ರಾಹಕರ ಗಮನಕ್ಕೆ ಬಂದಿದೆ. ಬ್ಯಾಂಕ್ ಆಡಳಿತ ಮಂಡಳಿ 4-5 ತಿಂಗಳಿನಿಂದ ಹಣ ನೀಡುವ ಭರವಸೆ ನೀಡಿದ್ದರೂ ಈವರೆಗೆ ಯಾರಿಗೂ ಹಣ ಪಾವತಿಸಿಲ್ಲ. ಜೊತೆಗೆ ಶಿರ್ವ ಶಾಖೆಯನ್ನು ಈಗಾಗಲೇ ಬಂದ್ ಮಾಡಲಾಗಿದೆ. ಹೀಗಾಗಿ ಠೇವಣಿದಾರರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಖಾತೆಯಲ್ಲಿದ್ದ ಹಣ ಹಿಂತಿರುಗಿಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ದಾರೆ.

ಆತ್ಮಹತ್ಯೆ ಯತ್ನ!
ಗ್ರಾಹಕರು ಸೊಸೈಟಿಗೆ ಮುತ್ತಿಗೆ ಹಾಕುತ್ತಿದ್ದಂತೆ ಮಹಿಳಾ ಸಿಬ್ಬಂದಿಯೊಬ್ಬರು ನಾನು ಸಾಯುತ್ತೇನೆ ಎಂದು ಹೆದರಿಸಿದ್ದಾರೆ. ಯಾರೊಂದಿಗೋ ಪೋನಿನಲ್ಲಿ ಮಾತನಾಡಿ, ತನ್ನ ಬ್ಯಾಗಿನಿಂದ ಮಾತ್ರೆಯನ್ನು ತೆಗೆದು, ಸುಮಾರು ಆರು ಮಾತ್ರೆಯನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಟನಾನಿರತರು ಸಿಬ್ಬಂದಿ ಬಾಯಿಯಿಂದ ಮಾತ್ರೆಯನ್ನು ಕಕ್ಕಿಸಿ, ಮನೆಗೆ ಕಳುಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಠೇವಣಿದಾರ ಶ್ರೀನಿವಾಸ್ ಪ್ರಭು, ಅತ್ಯಧಿಕ ಬಡ್ಡಿ ನೀಡುವ ಆಮಿಷವೊಡ್ಡಿ, ಹಿರಿಯ ನಾಗರಿಕರು ಮತ್ತು ಉಡುಪಿಯ ಸ್ಥಳೀಯರಿಂದ ಠೇವಣಿ ಇರಿಸಿಕೊಂಡಿದ್ದಾರೆ. ಆರಂಭದ ಆರು ತಿಂಗಳು ಸರಿಯಾಗಿ ಬಡ್ಡಿಯನ್ನು ನೀಡಿದ್ದಾರೆ. ನಂತರ ಶಿರ್ವದಲ್ಲಿ ಒಂದು ಶಾಖೆಯನ್ನು ತೆರೆದು ಅಲ್ಲಿಯೂ, ಠೇವಣಿ ಸಂಗ್ರಹಿಸಿದ್ದಾರೆ. ಈ ವರ್ಷ ಜೂನ್‌ನಿಂದ ಬಡ್ಡಿ ಹಾಗೂ ಅಸಲು ನೀಡದೇ ವಂಚಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ದೂರು ನೀಡುತ್ತಿದ್ದೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net