

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಈ ಅವಧಿಯಲ್ಲಿ ರಾಹುಲ್ ಗಾಂಧಿ ಅವರು ಜಿಲ್ಲೆಯ ರೈತರು, ಕಾರ್ಮಿಕರು, ಸಾಹಿತಿ ಸೇರಿ ವಿವಿಧ ಹಂತದ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚಿಸಲು ಸೆ. 27ರಂದು ಬೆಳಗ್ಗೆ 10.30ಕ್ಕೆ ನಗರದ ತಿರುಮಲ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸುರ್ಜಿವಾಲ,ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್,ಸಲೀಂ ಆಹ್ಮದ್, ಹರಿಪ್ರಸಾದ್ ಭಾಗವಹಿಸಲಿದ್ದಾರೆ ಎಂದರು.
ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಅರಾಜಕತೆ ಮತ್ತು ತುರ್ತು ಪರಿಸ್ಥಿತಿ ಮಾದರಿಯ ವಾತಾವರಣ ನಿರ್ಮಿಸಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಗ್ರತೆ, ಏಕತೆಗೆ ಧಕ್ಕೆ ಉಂಟು ಮಾಡಿವೆ. ಧರ್ಮ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸಿವೆ. ಕೊಟ್ಟ ಭರವಸೆ ಈಡೇರಿಸುವಲ್ಲಿ ವಿಫಲವಾಗಿವೆ ಎಂದು ದೂರಿದರು.
ಕೆಪಿಸಿಸಿ ಸದಸ್ಯ ಬಸವರಾಜ್, ಜಿಲ್ಲಾಧ್ಯಕ್ಷ ತಾಜ್‌ಪೀರ್, ಮುಖಂಡರಾದ ಮಹಡಿ ಶಿವಮೂರ್ತಿ, ಲಕ್ಷ್ಮಿಕಾಂತ್, ಸುದರ್ಶನ್, ಮೈಲಾರಪ್ಪ, ಸಂಪತ್, ನಾಗರಾಜ್, ನರಸಿಂಹರಾಜು, ರವಿಕುಮಾರ್, ಮುದಸಿರ್ ಇತರರಿದ್ದರು.ಪೇಸಿಎಂ ಅಭಿಯಾನ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ತನ್ನ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಆದರೆ, ಶೇ. 40 ಪರ್ಸಂಟೇಜ್ ಸರ್ಕಾರ ಎಂಬುದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ ಎಂದು ಹರಿಹಾಯ್ದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ದಾಖಲೆ ಇದ್ದರೆ ಬಿಜೆಪಿಯ ರಾಜ್ಯ ನಾಯಕರು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ ಅವರು, ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಅವಧಿಯಲ್ಲೂ ಆರೋಪ ಮಾಡಿದ್ದರು. ಆದರೆ, ಅವೆಲ್ಲವೂ ಸತ್ಯಕ್ಕೆ ದೂರವಾದುದು ಎಂದು ಕಿಡಿಕಾರಿದರು.
ಕಮಲ ಕೆಸರಿನಲ್ಲೇ ಮುಳುಗಲಿದೆ
ಪಾದಯಾತ್ರೆಗೆ ಹೋದ ಕಡೆಯಲೆಲ್ಲಾ ಅಭೂತಪೂರ್ವ ಸ್ವಾಗತ ದೊರೆಯುತ್ತಿದೆ. ಬಿಜೆಪಿ ಆಡಳಿತಕ್ಕೆ ಜನ ರೋಸಿ ಹೋಗಿದ್ದಾರೆ. ಹೀಗಾಗಿ ಎಲ್ಲೆಡೆ ಕಾಂಗ್ರೆಸ್ ಗಾಳಿ ಪರಿಮಳದಂತೆ ಬೀಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ʼಕಮಲʼ ನೀರಿಲ್ಲದೆಯೇ ಕೆಸರಿನಲ್ಲೇ ಪುಡಿಪುಡಿಯಾಗಿ ಮುಳುಗಲಿದೆ ಎಂದು ಭವಿಷ್ಯ ನುಡಿದರು.