'ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ ಕಮಲಾ ಹಂಪನಾ'

7
Published on

ಮೈಸೂರು: ಕನ್ನಡ ಸಾಹಿತ್ಯ ಮತ್ತು ಸಂಶೋಧನೆಗೆ ಅನನ್ಯ ಕೊಡುಗೆ ನೀಡಿದ್ದ ಸಾಹಿತಿ ಕಮಲಾ ಹಂಪನಾ ಅವರಿಗೆ ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಸಂಶೋಧನೆ, ಜೈನ ಸಾಹಿತ್ಯ ಅವರ ವಿಶೇಷ ಅಧ್ಯಯನ ಕ್ಷೇತ್ರವಾಗಿತ್ತು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹೇಳಿದರು.
ಜೈ ಭೀಮ್ ಜನಸ್ಪಂದನ ವೇದಿಕೆಯಿಂದ ಗಾಂಧಿನಗರದಲ್ಲಿರುವ ಉರಿಲಿಂಗಿ ಪೆದ್ದೇಶ್ವರ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಕಮಲಾ ಹಂಪನಾ ಅವರ ನುಡಿನಮನ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಹಳಗನ್ನಡ ಸಾಹಿತ್ಯದ ಸಮಗ್ರ ಅಧ್ಯಯನದಿಂದಾಗಿ ಮಹತ್ವದ ಕನ್ನಡ ಕಾವ್ಯಗಳನ್ನು ಸಂಗ್ರಹಿಸಿಕೊಟ್ಟರು. ಸ್ತ್ರೀವಾದಿ ನೆಲೆಯಲ್ಲಿ ವಿಮರ್ಶೆ, ಮಹಿಳೆಯರನ್ನು ಕುರಿತ ವೈಚಾರಿಕ ಬರಹಗಳೊಂದಿಗೆ ಕನ್ನಡ ಮಹಿಳಾ ಸಾಹಿತ್ಯ ವಿಸ್ತರಿಸಿದರು. ಕಮಲಾ ಹಂಪನಾ ಅವರ ಕನ್ನಡ ಸಾಹಿತ್ಯ ಸಂಶೋಧನೆ ಮತ್ತು ಚಿಂತನೆಗಳಿಗೆ ಅವರಿಗೆ ಕಲಿಸಿದ ದೊಡ್ಡ ಗುರುಪರಂಪರೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿತ್ತು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ಕಮಲಾಪ್ರಿಯ ಕಾವ್ಯನಾಮದ ಮೂಲಕ ಹಲವು ಸೃಜನಶೀಲ ಕೃತಿಗಳನ್ನು ಬರೆದ ಕಮಲಾ ಹಂಪನಾ, ಕನ್ನಡ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಕಥಾ ಸಂಕಲನಗಳು, ವಿಮರ್ಶಾ ಕೃತಿಗಳು, ಸಂಶೋಧನಾ ಗ್ರಂಥಗಳು, ಅನುವಾದಗಳು, ನಾಟಕ ರೂಪಕಗಳು, ಕಾದಂಬರಿಗಳನ್ನು ಬರೆದಿದ್ದಾರೆ ಎಂದು ಬಣ್ಣಿಸಿದರು.
ಕಮಲಾ ಹಂಪನಾ ಅವರ ಸಾಧನೆ ಗುರುತಿಸಿ ಹಲವು ಪ್ರಶಸ್ತಿ, ಗೌರವಗಳು ಸಂದಿವೆ. ಮೂಡುಬಿದಿರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂದು ಸ್ಮರಿಸಿದರು.
ಲೇಖಕಿ ಲೀಲಾ ಪ್ರಕಾಶ್ ಮಾತನಾಡಿ, ಜೈನ ಧರ್ಮವು ಪ್ರತಿಪಾದಿಸಿದ ಜೀವನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಜೈನಧರ್ಮದಲ್ಲಿ ಸತ್ಯ, ನೀತಿ, ಉತ್ತಮ ನಡವಳಿಕೆಗಳಿಗೆ ಪ್ರಧಾನ್ಯತೆ ಇದೆ. ಕಮಲಾ ಹಂಪನಾ ಅವರು ಜೈನ ಧರ್ಮ ಮತ್ತು ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದವರು ಎಂದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಜೀವಧಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜ್, ಕರ್ನಾಟಕ ಭೀಮ ಸೇನೆ ಸಂಘಟನಾ ರಾಜ್ಯ ಕಾರ್ಯದರ್ಶಿ ಎಂ.ಮಂಜುನಾಥ್, ಮುಖಂಡರಾದ ಪ್ರಮೋದ್, ಪ್ರಕಾಶ್, ನಾಗಣ್ಣ, ರಾಮ್‌ಸಿಂಗ್, ದೇವೇಂದ್ರ, ರಾಜೇಶ್, ವರುಣ ಮಹದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net