ಕಮಲಾ ಹಂಪನಾ ಅಗಲುವಿಕೆಯಿಂದ ಸಾಹಿತ್ಯದ ಒಂದು ಯುಗ ಮುಕ್ತಾಯ: ನಾಡೋಜ ಡಾ.ಮಹೇಶ ಜೋಶಿ

kasapa
Published on

ಬೆಂಗಳೂರು: ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವ ಸಾಹಿತಿ ಡಾ. ಕಮಲಾ ಹಂಪನಾ ಅವರ ಅಗಲುವಿಕೆಯಿಂದ ಸಾಹಿತ್ಯದ ಒಂದು ಯುಗದ ಮುಕ್ತಾಯ ಆದಂತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಪರಿಷತ್ತಿನಲ್ಲಿ ಶುಕ್ರವಾರ ಆಯೋಜಿಸಿದ್ದ ನುಡಿ ಗೌರವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಷತ್ತಿಗೆ ಹಿರಿಯಕ್ಕನಂತೆ ಮಾರ್ಗದರ್ಶನ ಮಾಡುತ್ತಿದ್ದ ಅವರ ಅಗಲುವಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಕತ್ತಲು ಕವಿದಂತಾಗಿದೆ ಎಂದು ವಿಷಾದಿಸಿದರು.

ಸಾಹಿತ್ಯ ಕ್ಷೇತ್ರದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿರುವ ಕಮಲಾ ಹಂಪನಾ, ಶೈಕ್ಷಣಿಕ ವಲಯದಲ್ಲಿ ಚಿರಪರಿಚಿತರು. ಮಹಿಳಾ ಸಾಹಿತ್ಯ ಜಗತ್ತಿನಲ್ಲಿ ಅವರದು ಅಚ್ಚಳಿಯದೆ ಉಳಿಯುವ ಹೆಸರು. ಹೋರಾಟದಿಂದಲೇ ಸಿದ್ದಿ ಪಡೆದವರು. ಕಥೆ, ಕಾವ್ಯ, ನಾಟಕ, ಸಂಶೋಧನೆ, ಸಂಪಾದನೆ, ವಿಮರ್ಶೆ ಜೊತೆಗೆ ತಮ್ಮ ಬಹುತೇಕ ಸಮಕಾಲೀನ ಲೇಖಕಿಯರಿಗಿಂತ ಭಿನ್ನವಾಗಿ ಸಾಹಿತ್ಯ, ಸಂಶೋಧನಾ ಕೃಷಿ ಮಾಡಿದ್ದಾರೆ ಎಂದು ಅವರ ಕೊಡುಗೆಗಳನ್ನು ಸ್ಮರಿಸಿದರು.

ಸಂಶೋಧಕ ನಾಡೋಜ ಡಾ.ಹಂಪ ನಾಗರಾಜಯ್ಯ ಮಾತನಾಡಿ, ತಮ್ಮ 71 ವರ್ಷಗಳ ಸ್ನೇಹವನ್ನು ಮೆಲುಕು ಹಾಕುತ್ತಾ, ಕಮಲಾ ಹಂಪಾನ ಅವರ ಧೀಶಕ್ತಿ ಬಹಳ ದೊಡ್ಡದು, ಹೋರಾಟದ ಹಾದಿಯಲ್ಲಿ ಅವರು ಸದಾ ಮುಂದಿದ್ದರು. ಸಮಾಜದಿಂದ ಎಷ್ಟೆಲ್ಲಾ ಪಡೆದ ನಾನು ಮರಳಿ ಏನಾದರೂ ಕೊಡಬೇಕು ಎಂಬ ನಿಶ್ಚಯದೊಂದಿಗೆ ಜೈನ ಸಾಹಿತ್ಯದ ಅಧ್ಯಾಯನದಲ್ಲಿ ತಮ್ಮನ್ನು ತೊಡಗಿಕೊಂಡರು. ಸೃಜನಶೀಲತೆ ಮತ್ತು ಸಂಶೋಧನೆ ಎರಡಕ್ಕೂ ಸಮಾನ ಮಹತ್ವ ನೀಡಿದ್ದ ಕಮಲಾ ಹೊರದೇಶಗಳಿಗೆ ಹೋದಾಗ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ಆಸಕ್ತರಾಗಿದ್ದರು ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸಂಶೋಧನೆಯ ನಿರಂತರತೆ, ಪರಿಶ್ರಮ,ವ್ಯಾಪಕತೆ, ಮೌಲಿಕತೆ ಮತ್ತು ಹೊಸತನವನ್ನು ನೀಡುವುದು ಮುಖ್ಯ ಎಂಬುದು ಕಮಲಾ ಹಂಪನಾ ಅವರ ಚಿಂತನೆಯಾಗಿತ್ತು. ಗ್ರಂಥ ಸಂಪಾದನೆ ಮತ್ತು ಉಪೇಕ್ಷಿತ ಬರಹಗಾರರ ಅಧ್ಯಯನದ ಬಗೆಗೆ ವಿಶೇಷ ಮಹತ್ವ ನೀಡಿದ್ದರು. ಅವರ ಹಾದಿಯಲ್ಲಿ ಸಾಗುವುದೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬರಹಗಾರ್ತಿ ಡಾ. ಕೆ.ಆರ್. ಸಂಧ್ಯಾ ರೆಡ್ಡಿ, ಪರಿಷತ್ತಿನ ಗೌರವ ಕೋಶಾಧ್ಯಕಕ್ಷ ಬಿ.ಎಂ.ಪಟೇಲ್ ಪಾಂಡು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net