ಹುಬ್ಬಳ್ಳಿ: ಕನ್ನಡ ಭಾಷೆಯ ಬಗ್ಗೆ ಇತಿಹಾಸ ಅರಿಯದೇ ನಟ ಕಮಲ್ ಹಾಸನ್ ನೀಡಿದ್ದ ಹೇಳಿಕೆ ಹಿನ್ನೆಲೆಯಲ್ಲಿ ನ್ಯಾಯಾಲಯವು ಸ್ವಾಗತಾರ್ಹ ತೀರ್ಪು ನೀಡಿದ್ದು, ನಟನ ವಿರುದ್ಧ ಜೂ. 5ರಂದು ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿದೆ ಎಂದು ಕರ್ನಾಟಕ ಡಾಕ್ಟರ್ ರಾಜಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಶಿವಾನಂದ ಮುತ್ತಣ್ಣವರ ತಿಳಿಸಿದ್ದಾರೆ.
ಭಾಷೆ ವಿಚಾರದಲ್ಲಿ ಕನ್ನಡಿಗರ ಕ್ಷಮೆ ಕೇಳಬೇಕೆಂದು ಕೋರ್ಟ್ ಹೇಳಿರುವುದು ಕಮಲ್ ದರ್ಪಕ್ಕೆ ಎಚ್ಚರಿಕೆ ನೀಡಿದಂತಾಗಿದೆ. ಕನ್ನಡಿಗರ ಕ್ಷಮೆ ಕೆಳದೇ ಹೈಕೋರ್ಟ್ ಮೆಟ್ಟಿಲೇರಿದ್ದ ಕಮಲ್ ತಮ್ಮ ಚಿತ್ರವನ್ನು ನ್ಯಾಯ್ಯಾಲಯದ ಮೂಲಕ ಪ್ರಸಾರ ಮಾಡುತ್ತೇನೆಂದು ಹೋಗಿ ಮುಖಭಂಗಕ್ಕೆ ಒಳಗಾಗಿದ್ದಾರೆ.
ನೆಲ ಜಲ ಭಾಷೆ ವಿಷಯದಲ್ಲಿ ಕನ್ನಡಿಗರು ರಾಜಿ ಆಗುವ ಮಾತೇ ಇಲ್ಲ. ನ್ಯಾಯಾಲಯವು ಕೂಡ ಖಡಕ್ ಎಚ್ಚರಿಕೆ ನೀಡಿದೆ. ಇದು ಕನ್ನಡಿಗರಿಗೆ ಸಿಕ್ಕ ಜಯ ಎಂದು ಮುತ್ತಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.