

ಬಸವನಬಾಗೇವಾಡಿ: ಪಟ್ಟಣದಲ್ಲಿ ತಮಿಳು ನಟ ಕಮಲ್ ಹಾಸನ್ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕರವೇ ಕಾರ್ಯಕರ್ತರು ಕಮಲಹಾಸನ್ ಹಾಗೂ ನಟಿ ರಮ್ಯಾ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.
ಕರವೇ ರಾಜ್ಯ ಸಂಚಾಲಕ ಸಂತೋಷಗೌಡ ಪಾಟೀಲ ಮಾತನಾಡಿ, ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ಎಂದಿರುವ ಕಮಲ ಹಾಸನ್ ಕನ್ನಡ ವಿರೋಧಿಯಾಗಿದ್ದಾರೆ, ಕನ್ನಡ ಭಾಷೆಗೆ ಸುಮಾರು ವರ್ಷಗಳ ಇತಿಹಾಸವಿದೆ. ಕಮಲ ಹಾಸನ್ ಮೊದಲು ಕನ್ನಡ ಭಾಷೆಯ ಬಗ್ಗೆ ತಿಳಿದುಕೊಳ್ಳಲಿ, ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇಂಥ ನಾಡದ್ರೋಹಿ ಹೇಳಿಕೆ ನೀಡುವುದನ್ನು ಬಿಡದಿದ್ದರೆ ಕನ್ನಡಿಗರು ತಕ್ಕ ಪಾಠ ಕಲಿಸಬೇಕಾಗುತ್ತದೆ. ಕಮಲ್ ಹಾಸನ್ ಚಿತ್ರವನ್ನು ಕರ್ನಾಟಕದ ಚಿತ್ರಮಂದಿರದಲ್ಲಿ ಪ್ರದರ್ಶಿಸಬಾರದು. ಒಂದು ವೇಳೆ ಚಿತ್ರ ಪ್ರದರ್ಶಿಸಿದರೆ ಅಂತಹ ಚಿತ್ರಮಂದಿರಕ್ಕೆ ಬೆಂಕಿ ಹಚ್ಚಲಾಗುವುದೆಂದು ಎಚ್ಚರಿಕೆ ನೀಡಿದರು.
ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಹಾರಿವಾಳ ಮಾತನಾಡಿ, ಕೂಡಲೇ ಕಮಲ ಹಾಸನ್ ಕರ್ನಾಟಕದ ಜನತೆಗೆ ಕ್ಷಮೆ ಯಾಚಿಸದಿದ್ದರೆ ರಾಜ್ಯದ್ಯಂತ ಕರವೇ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರವೇ ಮುಖಂಡರಾದ ಸಿದ್ದು ಮೇಟಿ, ಆನಂದ ಕಾಖಂಡಕಿ, ಮಡುಗೌಡ ಭಾವಿಕಟ್ಟಿ, ಅನೀಲ ಜುಗತಿ, ಮೈಹಿಬೂಬ್ ಟಕ್ಕಳಕಿ, ರವಿ ವಡ್ಡರ, ಇಮಾಮಸಾಬ್ ಇಂಗಳೇಶ್ವರ, ಯಲ್ಲಪ್ಪ ಬೇಲಿ, ಅಬ್ದುಲರಜಾಕ್ ಇನಾಮದಾರ ಇತರರಿದ್ದರು.