

ಹುಬ್ಬಳ್ಳಿ: ತಮಿಳು ನಟ ಕಮಲ್ ಹಾಸನ್ ಅವರು ಕನ್ನಡದ ಬಗ್ಗೆ ಕೀಳಾಗಿ ಮಾತನಾಡಿರುವುದು ಖಂಡನೀಯ ಎಂದು ಕನ್ನಡ ಚಿತ್ರರಂಗದ ನಾಯಕ ನಟಿ ರಚಿತಾ ರಾಮ್ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದಲ್ಲಿ ಹಲವಾರು ಅಭಿಮಾನಿ ಬಳಗ ಹೊಂದಿರುವ ನಟ ಕಮಲ್ ಹಾಸನ್ ಅವರು ಈ ರೀತಿ ಕನ್ನಡದ ಬಗ್ಗೆ ಮಾತನಾಡಿರುವುದು ಸಮಂಜಸವಲ್ಲ. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ನಾನು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದೆ. ಇಂದು ಕೂಡಾ ಆಗ್ರಹಿಸುತ್ತಿದ್ದೇನೆ ಎಂದರು.
‘ಥಗ್‌ವಾರ್’ ಚಲನಚಿತ್ರ ಬ್ಯಾನ್ ಸೇರಿ ಇತರ ವಿಷಯಗಳ ಕುರಿತು ಚಿತ್ರರಂಗದ ಹಿರಿಯರು ನಿರ್ಧರಿಸುತ್ತಾರೆ. ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಪ್ರೀತಿಯ ಭಾಷೆ ಕನ್ನಡ. ಬೇರೆ ಭಾಷೆ ಕುರಿತು ಮಾತನಾಡುವುದಿಲ್ಲ ಎಂದರು.
ಈ ಬಾರಿ ಕಪ್ ನಮ್ದೆ: ಈ ಬಾರಿ ಐಪಿಎಲ್ ಕಪ್ ನಮ್ಮದೆ. 18ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ಅವರ ಜರ್ಸಿ ನಂಬರ್ ಕೂಡ 18 ಇದೆ. ಹದಿನೆಂಟರ ಜತೆಗೆ ನಮಗೆಲ್ಲ ವಿಶೇಷ ನಂಟಿದೆ. ಹೀಗಾಗಿ ಈ ಬಾರಿ ಕಪ್ ಆರ್‌ಸಿಬಿ ತಂದುಕೊಡಲಿದೆ ಎಂದರು.