

ದೇವದುರ್ಗ: ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದ ತಮಿಳು ನಟ ಕಮಲ್ ಹಾಸನ್ ನಟನೆಯ ಎಲ್ಲ ಸಿನಿಮಾಗಳ ಪ್ರದರ್ಶನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸಿ ಪಟ್ಟಣದ ತಾಲೂಕು ಆಡಳಿತ ಸೌಧ ಮುಂದೆ ಕನ್ನಡಪರ ಸಂಘಟನೆಗಳು ಶನಿವಾರ ಪ್ರತಿಭಟನೆ ನಡೆಸಿದವು.
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಬಗ್ಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ಹೇಳಿಕೆ ಖಂಡನೀಯ. ಕಮಲ್ ಹೇಳಿಕೆ ಮೂರ್ಖತನದ ಪರಮಾವಧಿಯಾಗಿದೆ. ಕನ್ನಡ ಎಲ್ಲ ಭಾಷೆಗಳ ತಾಯಿ ಬೇರು. ಪ್ರಾಚೀನ ಕಾಲದ ಗ್ರೀಕ್ ದೇಶದಲ್ಲಿ ಕನ್ನಡ ಭಾಷೆ ಅಸ್ತಿತ್ವದಲ್ಲಿ ಇತ್ತು ಎಂದು ಅನೇಕ ಗ್ರಂಥಗಳಲ್ಲಿ ಉಲ್ಲೇಖವಿದೆ.
ಅನೇಕ ಸಾಹಿತಿಗಳು, ಬರಹಗಾರರು, ಇತಿಹಾಸಕಾರರು ಕನ್ನಡವನ್ನು ದೇಶದ ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಹಳೇಗನ್ನಡದ ಪಂಪ, ಪೊನ್ನ, ರನ್ನ, ಜನ್ನ ಕನ್ನಡ ಕೀರ್ತಿಯನ್ನು ದಶದಿಕ್ಕುಗಳಿಗೆ ಅರಳಿಸಿದ್ದಾರೆ. ದಕ್ಷಿಣ ಭಾರತದಿಂದ ಹಿಡಿದು ಉತ್ತರದ ನರ್ಮದಾ ನದಿವರೆಗೆ ಕನ್ನಡ ಪಸರಿಸಿದೆ.
ಪ್ರಾರಂಭದ ಹಂತದಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡ ಕಮಲ್ ಹಾಸನ್ ಈಗ ಯಾರನ್ನೋ ಮೆಚ್ಚಿಸಲು ಕನ್ನಡಕ್ಕೆ ಅವಮಾನ ಮಾಡಿದ್ದಾರೆ. ಕಮಲ್ ಕನ್ನಡಿಗರ ಕ್ಷಮೆ ಕೇಳಬೇಕು. ಸರ್ಕಾರ ಅವರು ನಟಿಸಿರುವ ಎಲ್ಲ ಸಿನಿಮಾಗಳ ಪ್ರದರ್ಶನವನ್ನು ಬ್ಯಾನ್ ಮಾಡಬೇಕು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅವರಿಗೆ ಬಹಿಷ್ಕಾರ ಹಾಕಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಹನುಮಂತಪ್ಪ ಮನ್ನಾಪುರ, ರಂಗಪ್ಪ ಬಲ್ಲಿದವ್, ರಂಗಪ್ಪ ನಾಯಕ, ಶಿವರಾಜ ರುದ್ರಾಕ್ಷಿ, ನರಸಪ್ಪ, ವೆಂಕಟೇಶ ಛಲವಾದಿ, ಅಮರೇಶ ಜಾಲಹಳ್ಳಿ, ಟಿ.ಜಯರಾಜ್, ನಾಗರಾಜ, ಜಯರಾಜ್, ಎಚ್.ಶಿವರಾಜ ಇತರರಿದ್ದರು.