

ಕೊಳ್ಳೇಗಾಲ: ತಾಲೂಕಿನಾದ್ಯಂತ ಗೌರಿ-ಗಣೇಶೋತ್ಸವವನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ವಿವಿಧ ಗ್ರಾಮ ಹಾಗೂ ಪಟ್ಟಣದ ವಿವಿಧೆಡೆ ಜನರು ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ವಿಶೇಷವಾಗಿ ಪಟ್ಟಣದ ನಾಯ್ಡು ತೋಟದಲ್ಲಿ ಬಲಮುರಿ ಸೆಲ್ವ ವಿನಾಯಕ ದೇವಸ್ಥಾನ ವತಿಯಿಂದ ಗೌರಿಗಣೇಶ ಹಬ್ಬದ 10ನೇ ವರ್ಷದ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಕಾಮಧೇನು ರೂಪದ ಗಣಪತಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹದೇಶ್ವರ ಕಾಲೇಜು ರಸ್ತೆಯ ಗುಪ್ತ ಲೇಔಟ್ನಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಶ್ರೀ ಹಿಂದು ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಲಾಯಿತು. ಚಿನ್ನದ ಅಂಗಡಿ ಬೀದಿ, ನಾಯಕರ ಚಿಕ್ಕ ಬೀದಿ, ಮಠದ ಬೀದಿ..ಹೀಗೆ ಹಲವೆಡೆ ಗಣಪತಿ ಪ್ರತಿಷ್ಠಾಪಿಸಿ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ಹಬ್ಬದ ಹಿನ್ನೆಲೆಯಲ್ಲಿ ಶ್ರೀ ಮರಳೇಶ್ವರ ಸ್ವಾಮಿ, ಶ್ರೀ ವರಸಿದ್ಧಿ ವಿನಾಯಕ ದೇವಾಲಯ, ಸಂಕಷ್ಟ ಹರ ವಿನಾಯಕ ಸನ್ನಿಧಿ ಸೇರಿದಂತೆ ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜಾ ಕೈಂಕರ್ಯ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಗಳಿಗೆ ಭೇಟಿ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.