

ಬಸವಕಲ್ಯಾಣ: ಜಾಗತಿಕ ಮಟ್ಟದಲ್ಲಿ ಬಸವ ತತ್ವ ಪ್ರಚಾರ-ಪ್ರಸಾರ ಆಶಯದೊಂದಿಗೆ ದಕ್ಷಿಣ ಆಫ್ರಿಕಾದಲ್ಲಿ ಜೂ.೮, ೯ರಂದು ನಡೆಯಲಿರುವ ಮಹಾತ್ಮ ಬಸವೇಶ್ವರ, ಮಹಾತ್ಮ ಗಾಂಧೀಜಿ, ನೆಲ್ಸನ್ ಮಂಡೇಲಾ ಅಂತಾರಾಷ್ಟ್ರೀಯ ಸಮ್ಮೇಳನ ನಿಮಿತ್ತ ಬಸವಭೂಮಿ ಕಲ್ಯಾಣದಿಂದ ಹಮ್ಮಿಕೊಂಡಿರುವ ಬಸವ ಜ್ಯೋತಿ ಯಾತ್ರೆಗೆ ಅನುಭವ ಮಂಟಪದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಗುರುಬಸವ ಫೌಂಡೇಷನ್ ಹೈದರಾಬಾದ್, ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಬೀದರ್, ಚೆನ್ನಬಸವೇಶ್ವರ ಜ್ಞಾನಪೀಠ ಕುಂಬಳಗೋಡ ಬೆಂಗಳೂರು ಸಹಯೋಗದಡಿ ಸಮ್ಮೇಳನಕ್ಕಾಗಿ ಬೀದರ್ ಜಿಲ್ಲೆ ಮತ್ತು ಮಹಾರಾಷ್ಟçದ ಸೊಲ್ಲಾಪುರ, ಪುಣೆ ಹಾಗೂ ಮುಬೈ ಮೂಲಕ ದಕ್ಷಿಣ ಆಫ್ರಿಕಾವರೆಗೆ ಹೊರಟಿರುವ ಜ್ಯೋತಿ ಯಾತ್ರೆಗೆ ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಚಾಲನೆ ನೀಡಿ ಶುಭ ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಕಕ ಪ್ರತಿ಼ಷ್ಠಾನ ಅಧ್ಯಕ್ಷ ಬಸವಕುಮಾರ ಪಾಟೀಲ್ ಮಾತನಾಡಿ, ಸಮ್ಮೇಳನ ಉದ್ದೇಶ ಮತ್ತು ಆಶಯ ತಿಳಿಸಿದರು. ನೆಲ್ಸನ್ ಮಂಡೇಲಾ ಅವರಿಗೆ ಪ್ರೇರಣೆ ಮಹಾತ್ಮ ಗಾಂಧೀಜಿ, ಗಾಂಧೀಜಿಗೆ ಪ್ರೇರಣೆ ವಿಶ್ವಗುರು ಬಸವಣ್ಣ ಎಂದರು.
ನೇತೃತ್ವ ವಹಿಸಿದ್ದ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಎಲ್ಲರೂ ಇಷ್ಟಪಡುವ ಬಸವಣ್ಣ, ಬಸವ ತತ್ವ ಜಗತ್ತಿಗೆ ಬೇಕಿದೆ. ಹೀಗಾಗಿ ಜಗತ್ತಿನ ವಿವಿಧ ರಾಷ್ಟçಗಳಲ್ಲಿ ಸಮ್ಮೇಳನ ಆಯೋಜಿಸುವ ಮೂಲಕ ಬಸವ ತತ್ವ ಪ್ರಸಾರ ಕಾರ್ಯ ಮಾಡಲಾಗುತ್ತಿದೆ ಎಂದು ಹೇಳಿದರು.
ಪೂಜ್ಯ ಸತ್ಯದೇವಿ ತಾಯಿ ಮಾತನಾಡಿದರು. ಪ್ರಮುಖರಾದ ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಬಸವಂತರಾವ ಬಿರಾದಾರ, ರವೀಂದ್ರ ಕೊಳಕುರ, ಸೋನಾಲಿ ನೀಲಕಂಠೆ, ಸುಮಿತ್ರಾ ಡಾವರಗಾಂವೆ, ವರ್ಷಾ ಖೂಬಾ, ಪ್ರಭು ರಾಠೋಡ್, ಭೀಮಶೆಟ್ಟಿ, ದತ್ತಾತ್ರೇಯ ಮೂಲಗೆ ಇತರರಿದ್ದರು. ನಾಗನಾಥ ಪಾಟೀಲ್ ಸ್ವಾಗತಿಸಿದರು. ಚಂದ್ರಪ್ಪ ಗುಂಗೆ ವಂದಿಸಿದರು. ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಜಗನ್ನಾಥ ಪತಂಗೆ ನಿರೂಪಣೆ ಮಾಡಿದರು.
ಜಗತ್ತಿಗೆ ಕಾಡುತ್ತಿರುವ ಸಮಸ್ಯೆಗಳಿಗೆ ಪರಿಹಾರ ಬಸವ ತತ್ವದಲ್ಲಿ ಅಡಗಿದೆ. ಜಾಗತಿಕ ಮಟ್ಟದಲ್ಲಿ ಬಸವ ತತ್ವ ಪ್ರಚಾರ ಮತ್ತು ಪ್ರಸಾರ ಕಾರ್ಯಕ್ಕೆ ಇನ್ನಷ್ಟು ವೇಗ ಸಿಗಬೇಕಿದೆ. ಬಸವ ತತ್ವ ಪ್ರಸಾರ ಉದ್ದೇಶದಿಂದ ದಕ್ಷಿಣ ಆಫ್ರಿಕಾದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಿರುವುದು ಸಂತಸ ತಂದಿದೆ. ಬಸವಣ್ಣನವರ ತತ್ವ, ಸಂದೇಶಗಳನ್ನು ಬೇರೆ-ಬೇರೆ ದೇಶಗಳಲ್ಲಿ ಪರಿಚಯಿಸಲು ಇಂತಹ ಸಮ್ಮೇಳನಗಳು ಸಹಕಾರಿಯಾಗಿವೆ.
ಶ್ರೀ ಶಿವಾನಂದ ಮಹಾಸ್ವಾಮೀಜಿ ಹುಲಸೂರು
ಬಸವಣ್ಣನವರ ವಚನಗಳು ಬೆಳಕಿದ್ದಂತೆ. ಅಜ್ಞಾನ, ಅಂಧಕಾರ ಮತ್ತು ಅನ್ಯಾಯದ ನಿರ್ಮೂಲನೆ, ಸರ್ವ ಸಮಾನತೆಯ ಸಾಮರಸ್ಯ ಸಮಾಜ ನಿರ್ಮಾಣಕ್ಕಾಗಿ ವಚನಗಳನ್ನು ಮನಸುಗಳಲ್ಲಿ ಬಿತ್ತುವ ಕಾರ್ಯ ಎಲ್ಲೆಡೆ ಆಗಬೇಕಿದೆ. ಸಾಹಿತ್ಯ ಜತೆಗೆ ಬಸವ ತತ್ವ ಜನಮನಕ್ಕೆ ಮುಟ್ಟಿಸುವ ಆಶಯ ಸಮ್ಮೇಳನದ್ದಾಗಿದೆ.
| ಬಸವಕುಮಾರ ಪಾಟೀಲ್ ಅಧ್ಯಕ್ಷ, ಕಲ್ಯಾಣ ಕರ್ನಾಟಕ ಪ್ರತಿಷ್ಠಾನ