

ಬೇಲೂರು: ಲೋಕ ಕಲ್ಯಾಣಾರ್ಥ ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದಲ್ಲಿ ಶುಕ್ರವಾರ ದೇವರ ಕಲ್ಯಾಣೋತ್ಸವವು ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಸೇವಾರ್ಥದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ದೇವರ ಕಲ್ಯಾಣೋತ್ಸವ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ತೆರಳುವ ಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಶ್ರೀ ಚನ್ನಕೇಶವಸ್ವಾಮಿ, ಸೌಮ್ಯನಾಯಕಿ ಮತ್ತು ರಂಗನಾಯಕಿ ದೇವರ ಉತ್ಸವ ಮೂರ್ತಿಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶುಕ್ರವಾರ ಸಂಜೆ ಪ್ರಾರಂಭವಾದ ಕಲ್ಯಾಣೋತ್ಸವಕ್ಕೆ ಸೇವಾರ್ಥದಾರ ಗ್ರಾನೈಟ್ ರಾಜಶೇಖರ್ ದಂಪತಿಗೆ ಅರ್ಚಕರು ಕಂಕಣ ಕಟ್ಟಿ ದೇವರ ಉತ್ಸವ ಮೂರ್ತಿಯೊಂದಿಗೆ ದೇಗುಲದ ಅಷ್ಟ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಕಲ್ಯಾಣೋತ್ಸವದ ಅಂಗವಾಗಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್ಟರ್ ಮತ್ತು ನರಸಿಂಹ ಭಟ್ಟರ್ ಸುಮಂಗಲಿಯರಿಂದ ಗೋಧಿಕಲ್ಲು ಅರಿಶಿನ ಕುಟ್ಟುವಿಕೆ ಶಾಸ್ತ್ರವನ್ನು ನೆರವೇರಿಸಿದರು. ನಂತರ ಕಲ್ಯಾಣ ಮಂಟಪದಲ್ಲಿ ಚನ್ನಕೇಶವಸ್ವಾಮಿ, ಸೌಮ್ಯನಾಯಕಿ ಮತ್ತು ರಂಗನಾಯಕಿ ಅಮ್ಮನವರನ್ನು ಪ್ರತಿಷ್ಠಾಪಿಸಿ ಸಂಪ್ರದಾಯದಂತೆ ಕನ್ಯದಾನ, ಆಗ್ನಿ ಪ್ರದಕ್ಷಿಣೆ, ಲಾಜಹೋಮ, ಉಡುಗರೆ, ಮಹಾ ಸಂಕಲ್ಪ, ನಾದಸ್ವರದ ಗಟ್ಟಿಮೇಳದೊಂದಿಗೆ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟರ್ ಅವರು ಮಾಂಗಲ್ಯವನ್ನು ಭಕ್ತರ ಸಮ್ಮುಖದಲ್ಲಿ ಪ್ರದರ್ಶಿಸಿ ಮಂತ್ರದೊಂದಿಗೆ ಅಮ್ಮನವರಿಗೆ ಕಟ್ಟಿದರು. ಭಕ್ತರು ಕಲ್ಯಾಣೋತ್ಸವದ ದೃಶ್ಯಗಳನ್ನು ವೀಕ್ಷಿಸಿ ಧನ್ಯರಾದರು. ಈ ಸಂದರ್ಭ ನೆರೆದಿದ್ದ ಭಕ್ತರಿಗೆ ಪ್ರಸಾದ ನಿವಿಯೋಗಿಸಲಾಯಿತು.
ದೇವರ ಕಲ್ಯಾಣೋತ್ಸವದ ಸಂದರ್ಭದಲ್ಲಿ ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ವೀರಶೈವ ಸಂಘದ ಅಧ್ಯಕ್ಷ ರವಿಕುಮಾರ್, ಯುವ ಅಧ್ಯಕ್ಷ ಚೇತನ್, ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಮುಖಂಡರಾದ ಬಿ.ಎಂ.ದೊಡ್ಡವೀರೇಗೌಡ, ಭರತ್, ದೇವರಾಜ್, ರಾಯಾಪುರ ಶಿವಣ್ಣ, ಪ್ರೋ.ಜಯಣ್ಣಗೌಡ, ಸತ್ಯನಾರಾಯಣ ಇತರರು ಇದ್ದರು.