

ಆನೇಕಲ್: ಸೂಕ್ತ ನಾಮಲಕ ಸೇರಿ ಯಾವುದೇ ಭದ್ರತೆ ಇಲ್ಲದ ಕಾರಣ ಬನ್ನೇರುಘಟ್ಟ ಸುವರ್ಣಮುಖಿ ಕಲ್ಯಾಣಿ ಸಾವಿನ ಕೂಪವಾಗುತ್ತಿದೆ!.
ಹೌದು...ಶನಿವಾರ ಕಲ್ಯಾಣಿಗಿಳಿದ ವಿದ್ಯಾರ್ಥಿಗಳಿಬ್ಬರು ಈಜುಬಾರದೆ ಮೃತಪಟ್ಟಿದ್ದು, ಸುರಕ್ಷತೆ ಇಲ್ಲದಿರುವುದೇ ಅನಾಹುತಕ್ಕೆ ಕಾರಣ ಎನ್ನಲಾಗುತ್ತಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಸುತ್ತಮುತ್ತಲ ಬೆಟ್ಟಗುಡ್ಡಗಳು ಇರುವುದರಿಂದ ಇಲ್ಲಿಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಬನ್ನೇರುಘಟ್ಟದಲ್ಲಿರುವ ಸುವರ್ಣಮುಖಿ ಕಲ್ಯಾಣಿಯಲ್ಲಿ ಪದೇಪದೆ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ನೀರಿನಲ್ಲಿ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.
ಸ್ನೇಹಿತರ ಪ್ರಾಣ ತೆಗೆದ ರೀಲ್ಸ್ ಹುಚ್ಚಾಟ: ಸುವರ್ಣಮುಖ ಕಲ್ಯಾಣಿಗೆ ಇಳಿಯುವ ಪ್ರವಾಸಿಗರು ಆಳ ಗೊತ್ತಾಗದೆ ಕಲ್ಯಾಣಿಯ ಮಧ್ಯ ಹೋಗಿ ಈಜಲು ಬಾರದೆ ಜಲಸಮಾಧಿಯಾಗುತ್ತಿದ್ದಾರೆ. ಬಹುತೇಕರು ಕಲ್ಯಾಣಿಗೆ ಇಳಿದು ರೀಲ್ಸ್ ಮಾಡಲು ಮುಂದಾಗುತ್ತಿದ್ದು, ಅನಾಹುತಕ್ಕೆ ಕಾರಣವಾಗುತ್ತಿದೆ, ಶನಿವಾರ ಸುವರ್ಣಮುಖಿ ಕಲ್ಯಾಣಿಯಲ್ಲಿ ಮುಳುಗಿ ಮೃತಪಟ್ಟ ಬೊಮ್ಮನಹಳ್ಳಿಯ ಗಾರ್ವೆಬಾವಿಪಾಳ್ಯದ ದೀಪು (20), ಯೋಗೀಶ್ವರನ್(20) ಸಾವಿಗೆ ರೀಲ್ಸ್ ಹುಚ್ಚಾಟವೇ ಕಾರಣ ಎನ್ನಲಾಗುತ್ತಿದೆ.
ಕಾಲೇಜು ವಿದ್ಯಾರ್ಥಿಗಳು ಸ್ನೇಹಿತರ ಜತೆ ಬನ್ನೇರುಘಟ್ಟಕ್ಕೆ ಹೋಗಿ ಕಲ್ಯಾಣಿಯಲ್ಲಿ ಈಜಾಡಲು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಕಲ್ಯಾಣಿ ಮಧ್ಯೆ ಆಳ ಇರುವುದು ಗೊತ್ತಾಗದೆ, ದೀಪು ಹಾಗೂ ಯೋಗೇಶ್ವರನ್ ಸ್ನೇಹಿತರ ಜತೆ ಕಲ್ಯಾಣಿ ಮಧ್ಯೆ ಹೋಗಿದ್ದು, ಯೋಗೇಶ್ವರನ್ ಮೊದಲು ಮುಳುಗಿದ್ದಾನೆ, ಈ ಸಂದರ್ಭದಲ್ಲಿ ಕಲ್ಯಾಣಿ ಬಳಿ ಮೇಲೆ ಕುಳಿತಿದ್ದ ಸ್ನೇಹಿತರು ರೀಲ್ಸ್ ಮಾಡುವ ಸಲುವಾಗಿ ವಿಡಿಯೋ ಹಾಗೂ ಫೋಟೋ ತೆಗೆದುಕೊಳ್ಳುತ್ತಾ ಮೋಜು ಮಾಡುತ್ತಾ ಕುಳಿತಿದ್ದರು. ಆದರೆ ಯೋಗೀಶ್ವರನ್ ಮೇಲೆತ್ತಲು ಸಹಾಯಕ್ಕೆ ತೆರಳಿದ್ದ ದೀಪು ಕೂಡ ನೀರಿನಲ್ಲಿ ಮುಳುಗಿದ್ದಾನೆ. ಕೊನೆಗೆ ಇಬ್ಬರೂ ಮುಳುಗಿದ್ದನ್ನು ಕಂಡ ಸ್ನೇಹಿತರು ರಕ್ಷಣೆಗೆ ಕೂಗಾಡುವಷ್ಟರಲ್ಲಿ ಇಬ್ಬರ ಪ್ರಾಣಪಕ್ಷಿ ಹಾರಿಹೋಗಿತ್ತು.
ಇದೇ ಮೊದಲಲ್ಲ!ಸುವರ್ಣಮುಖಿ ಕಲ್ಯಾಣಿಯಲ್ಲಿ ಮುಳುಗಿ ಸಾವಿಗೀಡಾಗಿರುವುದು ಇದೇ ಮೊದಲಲ್ಲ. ಸರಿಯಾದ ರೀತಿಯಲ್ಲಿ ಮಾಹಿತಿ ಹಾಗೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕಲ್ಯಾಣಿಗೆ ಇಳಿಯದೇ ಇರುವಂತೆ ಯಾವುದೇ ನಾಮಫಲಕ ಹಾಗೂ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡದೇ ಇರುವುದು ಅನಾಹುತಕ್ಕೆ ಕಾರಣವಾಗುತ್ತಿದೆ.
ಸುವರ್ಣಮುಖಿ ಕಲ್ಯಾಣಿ ಬಳಿ ಯಾವುದೇ ಸುರಕ್ಷತೆ ಇಲ್ಲ. ಇಲ್ಲಿನ ಮುಜರಾಯಿ ಅಧಿಕಾರಿಗಳನ್ನು ಕೇಳಿದಾಗ ಅರಣ್ಯ ಇಲಾಖೆಯವರು ಸುರಕ್ಷತೆ ಮಾಡಲು ಬಿಡುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಆದಷ್ಟು ಬೇಗ ನಾಮಫಲಕ ಸೇರಿ ಎಲ್ಲ ಸುರಕ್ಷತೆ ಕೈಗೊಳ್ಳಲು ಸೂಚಿಸಿದ್ದೇನೆ. -ನಾಗೇಶ್ ಅಡಿಷನಲ್ ಎಸ್ ಪಿ ಬೆಂಗಳೂರು ಗ್ರಾಮಾಂತರ ರಜೆ ಇದೆ. ಬೇಗೂರಿಗೆ ಹೋಗುತ್ತೇನೆ ಎಂದು ಹೇಳಿ ಹೋಗಿದ್ದ, ರೀಲ್ಸ್ ಮಾಡಬೇಕು ಎಂದು ಬನ್ನೇರುಘಟ್ಟ ಕಲ್ಯಾಣಿಗೆ ಸ್ನೇಹಿತರ ಜತೆ ತೆರಳಿದ್ದಾರೆ, ನನ್ನ ಮಗ ಸ್ನೇಹಿತರ ಮಾತು ಕೇಳಿ ಇಲ್ಲಿಗೆ ಬಂದು ಪ್ರಾಣ ಕಳೆದುಕೊಂಡಿದ್ದಾನೆ. ಜಯಪ್ರಕಾಶ್ ಮೃತ ಯೋಗೇಶ್ವರನ್ ತಂದೆ