

ಶ್ರೀರಂಗಪಟ್ಟಣ: ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಸಮೀಪಿಸುತ್ತಿದ್ದು, ತಕ್ಷಣ ಗಜೇಂದ್ರ ಮೋಕ್ಷ ಕಲ್ಯಾಣಿ ಹಾಗೂ ದೇವಾಲಯದ ಸುತ್ತಮುತ್ತಲ ಆವರಣ ಸ್ವಚ್ಛಗೊಳಿಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವಂತೆ ಹಿಂದು ಜಾಗರಣ ವೇದಿಕೆ ಆಗ್ರಹಿಸಿತು.
ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ವೇದಿಕೆ ಕಾರ್ಯಕರ್ತರು ಇಒ ಉಮಾ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಚಂದನ್ ಮಾತನಾಡಿ, ಶ್ರೀರಂಗನಾಥಸ್ವಾಮಿ ರಾಜ್ಯ, ಹೊರರಾಜ್ಯ ಹಾಗೂ ವಿದೇಶದಲ್ಲೂ ಭಕ್ತರನ್ನು ಹೊಂದಿದ್ದು, ಫೆ.5ರಂದು ನಡೆಯುವ ಬ್ರಹ್ಮರಥೋತ್ಸವ ಹಾಗೂ ದೊಡ್ಡ ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ. ಆದರೆ ಹೀಗಿದ್ದರೂ ಗಜೇಂದ್ರ ಮೋಕ್ಷ ನಡೆಯುವ ಕಲ್ಯಾಣಿಯನ್ನು ಇನ್ನೂ ಸ್ವಚ್ಛಗೊಳಿಸಿ ಪೂಜಾ ಕಾರ್ಯಕ್ಕೆ ಸಿದ್ಧಗೊಳಿಸಿಲ್ಲ. ಇದರೊಂದಿಗೆ ದೇವಾಲಯ ಸುತ್ತಮುತ್ತ ಸೇರಿದಂತೆ ಶ್ರೀರಂಗನಾಥ ಮೈದಾನ ಕಸ, ಪ್ಲಾಸ್ಟಿಕ್ ಬಾಟಲಿ ಮತ್ತು ತ್ಯಾಜ್ಯಗಳ ರಾಶಿಗಳಿಂದ ತುಂಬಿ ದುರ್ನಾತ ಬೀರಿದೆ. ಭಕ್ತರು, ಜನರು ಮತ್ತು ಪ್ರವಾಸಿಗರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. ಈ ಬಗ್ಗೆ ಇಲಾಖೆ ವತಿಯಿಂದ ತುರ್ತಾಗಿ ಕ್ರಮವಹಿಸಬೇಕು.
ಪ್ರಮುಖವಾಗಿ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥದ ಸಿಂಗಾರಕ್ಕೆ ಅಳವಡಿಸಲಾಗುವ ಬಣ್ಣ ಬಣ್ಣದ ವಸ್ತ್ರಗಳು ಹಲವು ಕಡೆಗಳಲ್ಲಿ ಹರಿದು ಹಾಳಾಗಿದ್ದು, ಜತೆಗೆ ಕೊಳೆಯಿಂದ ರಾಡಿಯಾಗಿವೆ. ಹೀಗಿದ್ದರೂ ಈ ಬಟ್ಟೆಗಳನ್ನೇ ಹಲವು ವರ್ಷಗಳಿಂದ ಬಳಸಲಾಗುತ್ತಿದ್ದು, ಇದನ್ನು ಬದಲಾಯಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಲಾಗುತ್ತಿದೆ. ಈ ಬಾರಿ ರಥೋತ್ಸವಕ್ಕೆ ಹರಕು ಬಟ್ಟೆ ಹಾಕಿ ಅವಮಾನಿಸಿದ್ದಲ್ಲಿ, ಶೀಘ್ರವೇ ಮತ್ತೊಂದು ಬಾರಿ ಆಗಮಿಸಿ ಪರಿಶೀಲಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನಾಕಾರರ ಮನವಿ ಆಲಿಸಿದ ಇಒ ಉಮಾ, ದೇವಾಲಯಲದ ಅನೇಕ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಎಲ್ಲ ಕಡೆಗಳಲ್ಲೂ ಸ್ವಚ್ಛತೆ ಹಾಗೂ ಮೂಲ ಸೌಲಭ್ಯಕ್ಕೂ ಆದ್ಯತೆ ನೀಡಲಾಗಿದೆ. ರಥಕ್ಕೆ ಹಾಕಲು ಮಧ್ಯಭಾಗದ ವಸ್ತ್ರಗಳನ್ನು ಹುಬ್ಬಳ್ಳಿಯಿಂದ ತರಲಾಗುತ್ತಿದೆ. ಯಾವುದೇ ಲೋಪವಾಗದಂತೆ ಕ್ರಮವಹಿಸಲಾಗುವುದು ಎಂದರು.
ಪ್ರಾಂತ ಕಾರ್ಯಕಾರಿಣಿ ಸದಸ್ಯ ವಕೀಲ ಬಾಲರಾಜು, ತಾಲೂಕು ಕಾರ್ಯಕಾರಿಣಿ ಸದಸ್ಯ ದರಸಗುಪ್ಪೆ ರಾಜು, ನಗರ ಸಂಚಾಲಕ ಮದನ್ ಗೌಡ, ಸಂಘ ಪರಿವಾರದ ಮುಖಂಡರಾದ ಸನತ್, ಶಂಕರ್, ಬಿಜೆಪಿ ಮುಖಂಡರಾದ ಲಕ್ಷ್ಮೀನಾರಾಯಣ, ಸುನೀಲ್, ಹೇಮಂತ್, ಪಿ.ರಾಘು ಇತರರು ಹಾಜರಿದ್ದರು.