

ಕೊಪ್ಪಳ:ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ನಡೆದ ಅವಿರತ ಹೋರಾಟದಲ್ಲಿ ಭಾಗಿಯಾದ ಮಹನಿಯರ ತ್ಯಾಗ-ಬಲಿದಾನ ಸ್ಮರಣೀಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಅಂಗವಾಗಿ ಧ್ವಜರೋಹಣ ನೆರವೇರಿಸಿ ಮಾತನಾಡಿದರು.
ದೇಶಕ್ಕೆ ಆ.15ರಂದು ಸ್ವಾತಂತ್ರೃ ಸಿಕ್ಕರೆ, ನಮಗೆ ಒಂದು ವರ್ಷ ತಡವಾಯಿತು. ಹೈದ್ರಾಬಾದ್ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದರಿಂದ ನಿಜಾಮ ಒಕ್ಕೂಟ ಸೇರಲು ನಿರಾಕರಿಸಿದ್ದ. ಆದರೆ, ಸರ್ದಾರ ವಲ್ಲಭ ಭಾಯಿ ಪಟೇಲ್ ಅವರ ನೇತೃತ್ವದಲ್ಲಿ ನಡೆದ ಆಪರೇಷನ್ ಪೋಲೋ ಕಾರ್ಯಾಚರಣೆಗೆ ಶರಣಾಗಿ ಭಾರತ ಸೇರಿದ. ಈ ದಿನವನ್ನು ನಾವೆಲ್ಲ ಸ್ವಾತಂತ್ರೃ ದಿನವಾಗಿ ಆಚರಿಸುತ್ತಿದ್ದೇವೆ. ದೇಶದ ಇತರ ಭಾಗದ ಜನರಿಗೆ ಒಂದೇ ಸ್ವಾತಂತ್ರೃ ದಿನಾಚರಣೆ. ನಮಗೆ ಎರಡೆರೆಡು ಸ್ವಾತಂತ್ರೃ ದಿನಾಚರಣೆ ಲಭಿಸಿರುವುದು ವಿಶೇಷ ಎಂದರು.
ಹೈಕ ವಿಮೋಚನೆಗೆ ಅನೇಕರು ತ್ಯಾಗ-ಬಲಿದಾನ ಮಾಡಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವನ್ನು ನಾವು ಅನುಭವಿಸುತ್ತಿದ್ದೇವೆ. ಜಿಲ್ಲೆಯ ರಾಮಚಂದ್ರಪ್ಪ ವೀರಪ್ಪ, ವೀರಭದ್ರಪ್ಪ ಶಿರೂರ, ಶಿವಮೂರ್ತಿಸ್ವಾಮಿ ಅಳವಂಡಿ, ಪುಂಡಲೀಕಪ್ಪ ಜ್ಞಾನನಮೋಠೆ, ಬೇಳೂರ ತಿಮ್ಮನಗೌಡ ಸೇರಿ ಅನೇಕರು ವಿಮೋಚನಾ ಚಳವಳಿಯಲ್ಲಿ ಭಾಗಿಯಾಗಿದ್ದರೆಂದು ನೆನೆದರು.
ಭಾವಚಿತ್ರಕ್ಕೆ ಪುಷ್ಪಾರ್ಪಣೆಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಸರ್ದಾರ ವಲ್ಲಭ ಭಾಯ್ ಪಟೇಲ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸಂಸದ ಸಂಗಣ್ಣ ಕರಡಿ, ಶಾಸಕ ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಡಿಸಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಎಸ್ಪಿ ಯಶೋದಾ ವಂಟಗೋಡಿ, ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ್ ಇತರರಿದ್ದರು.