ಎರಡು ವರ್ಷಕ್ಕೊಮ್ಮೆ ಕಲ್ಯಾಣ ಕರ್ನಾಟಕ ಉತ್ಸವ: ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ

Kannada Sahithya Sammelana 5 Feb 20
Published on

ಕಲಬುರಗಿ: ಹೈದರಾಬಾದ್-ಕರ್ನಾಟಕ ಪ್ರದೇಶ ಹೆಸರಿನಲ್ಲಿದ್ದ ಈ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಲಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಂಸ್ಕೃತಿ, ಸಾಹಿತ್ಯ ಎಲ್ಲೆಡೆ ಪಸರಿಸುವಂತಾಗಲು ಪ್ರತಿ ಎರಡು ವರ್ಷಕ್ಕೊಮ್ಮೆ ‘ಕಲ್ಯಾಣ ಕರ್ನಾಟಕ ಉತ್ಸವ’ ಹೆಸರಿನಲ್ಲಿ ರಾಜ್ಯ ಮಟ್ಟದ ಉತ್ಸವ ಆಚರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿದರು.

ಅವರು ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ಉದ್ಯೋಗದ ಭಾಷೆಯಾಗಬೇಕು ಎಂಬ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ಖಾಸಗಿ ವಲಯದಲ್ಲೂ ಕನ್ನಡಿಗರಿಗೇ ಪ್ರಥಮ ಆದ್ಯತೆ ನೀಡುವ ಕುರಿತು ಆದೇಶ ಹೊರಡಿಸಿದೆ. ಸಾಹಿತ್ಯಕ ಮತ್ತು ಸಾಂಸ್ಕøತಿಕ ಸಂಸ್ಥೆಗಳು, ನಿಗಮ ಹಾಗೂ ಮಂಡಳಿಗಳು, ಅಕಾಡೆಮಿಗಳು, ಪ್ರಶಸ್ತಿ ಆಯ್ಕೆ ಸಮಿತಿಗಳು ಇತ್ಯಾದಿಗಳಲ್ಲಿ ಈ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲವೆಂಬ ಕೂಗು ಬಹಳ ದಿನಗಳಿಂದಲೂ ಇದೆ. ಈ ಕೊರತೆಯನ್ನು ನಿವಾರಿಸಲು ನಮ್ಮ ಸರ್ಕಾರ ಈ ಭಾಗಕ್ಕೆ ಸಲ್ಲಬೇಕಾದ ಪ್ರಾತಿನಿಧ್ಯ ಒದಗಿಸಲು ಬದ್ಧವಾಗಿದೆ ಎಂದರು.

ನೆಲ ಜಲ ರಕ್ಷಣೆಗೆ ಕಟಿಬದ್ಧ : ಪ್ರಸ್ತುತ ಮಹಾರಾಷ್ಟ್ರದಲ್ಲಿರುವ ಸಮ್ಮಿಶ್ರ ಸರ್ಕಾರ ಮತ್ತೆ ಗಡಿ ತಂಟೆಗೆ ಮುಂದಾಗಿದೆ. ಮಹಾಜನ್ ವರದಿ ಜಾರಿಗೆ ವರದಿ ಮಂಡನೆಯಾದ ದಿನದಿಂದಲೂ ಅಡ್ಡಿಗಳು ಎದುರಾಗಿವೆ. ಕೇವಲ ರಾಜಕೀಯ ಕಾರಣಕ್ಕಾಗಿ ಆಗಾಗ ಗೊಂದಲವೆಬ್ಬಿಸುವ ಪ್ರಯತ್ನಗಳು ನಡೆಯುತ್ತಿವೆ. ವಿವಾದ ಸುಪ್ರೀಂಕೋರ್ಟಿನಲ್ಲಿದೆ. ಇದಕ್ಕೆ ತಾರ್ಕಿಕ ಅಂತ್ಯ ದೊರೆತು ನಮ್ಮ ನೆಲ ಮತ್ತು ಜಲದ ರಕ್ಷಣೆ ಮಾಡಿಕೊಳ್ಳಲು ಪೂರಕವಾದ ಕಾರ್ಯತಂತ್ರವನ್ನು ನಮ್ಮ ಸರ್ಕಾರ ರೂಪಿಸಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net