ಜಿಲ್ಲಾಡಳಿತದಿಂದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ 371(ಜೆ) ಕಾಯಿದೆಯು ಕಕ ಭಾಗದಕ್ಕೆ ಶ್ರೀರಕ್ಷೆ -ಉಸ್ತುವಾರಿ ಸಚಿವ

raichur
raichur
Published on

ರಾಯಚೂರು ಕಲ್ಯಾಣ ಕರ್ನಾಟಕ ಭಾಗದಲ್ಲಿ 371(ಜೆ) ಸ್ಥಾನಮಾನ ಸಿಕ್ಕ ಬಳಿಕ ಈ ಭಾಗದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ವಿಶೇಷ ಮೀಸಲು ದೊರೆಯಲು ಸಾಧ್ಯವಾಗಿದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಪಂ,ಮಹಾನಗರ ಪಾಲಿಕೆಯಿಂದ ಆಯೋಜನೆ ಮಾಡಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೇರವೆರಸಿ ಮಾತನಾಡಿದರು. 371(ಜೆ) ಮೂಲಕ ವೃತ್ತಿಪರ ಕೋರ್ಸ್‌ಗಳಲ್ಲಿ ಮೀಸಲು ದೊರೆತು ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ಡಾಕ್ಟರ್,ಎಂಜಿನಿಯರ್ ಆಗಲು ಸಾಧ್ಯವಾಗಿದೆ. ಕಳೆದ 10 ವರ್ಷದಲ್ಲಿ 80 ಸಾವಿರ ಸರ್ಕಾರಿ ನೌಕರಿಗಿಟ್ಟಿಸಲಾಗಿದೆ. ಈ ಭಾಗಕ್ಕೆ 18,000 ಕೋಟಿ ರೂ. ಮಂಜೂರಾಗಿ 371 ಜೆ ಕಾನೂನಿನಿಂದ ಪ್ರತಿ ಮಗುವಿಗು ಸಹಾಯವಾಗಿದೆ ಎಂದರು.

ಅಖಂಡ ಭಾರತ ನಿರ್ಮಾಣದ ಪ್ರಯತ್ನ, ಹೋರಾಟಗಾಥೆ ಸಾಮಾನ್ಯವಾದ ಸಂಗತಿಯಲ್ಲ.

ಅಹಿಂಸಾ ಮಾರ್ಗದಲ್ಲಿ ಪ್ರೀತಿಯಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನದ ಭದ್ರಬುನಾದಿಯ ಮೇಲೆ ದೇಶ ನಡೆಯುತ್ತಿದೆ. ಸಾಮಾಜಿಕ ಕಳಕಳಿ ಹೊಂದಿದ ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆಯ ಸತತ ಪ್ರಯತ್ನದಿಂದ 2012ರಲ್ಲಿ ಸಂಸತ್ತನಲ್ಲಿ ಪಾಸಾಗಿ 371(ಜೆ) ಕಾಯಿದೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಯಿತು ಎಂದು ತಿಳಿಸಿದರು.

ನಮ್ಮ ದೇಶಕ್ಕೆ 1947ರಂದು ಸ್ವಾತಂತ್ರ್ಯ ದೊರೆತರೂ ಕಲ್ಯಾಣ ಕರ್ನಾಟಕ ಭಾಗವು ಸ್ವಾತಂತ್ರ್ಯದಿಂದ ದೂರ ಉಳಿಯಿತು. ಇದಕ್ಕಾಗಿ ಅವಿರತ ಹೋರಾಟ ನಡೆಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಹೈದ್ರಾಬಾದ್ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು,ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು ಸ್ವತಂತ್ರಗೊಳ್ಳದೇ 13 ತಿಂಗಳ ಕಾಲ ನಿಜಾಮರ ಆಳ್ವಿಕೆಯಲ್ಲಿದ್ದವು. ’ಆಪರೇಷನ್ ಪೋಲೋ’ ಎಂಬ ಪೊಲೀಸ್ ಕ್ರಮದ ನಂತರ ಈ ಪ್ರದೇಶವನ್ನು ಸೆಪ್ಟೆಂಬರ್ 17, 1948ರಂದು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಲಾಯಿತು.

ರಾಜ್ಯ ಸರ್ಕಾರವು 371(ಜೆ) ಅನುಷ್ಠಾನಕ್ಕೆ ವಿಶೇಷ ಆದ್ಯತೆ ನೀಡಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯದ ಮಂಜೂರಾತಿಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ. 371 (ಜೆ) ಕಾಯಿದೆಯಿಂದಾಗಿ ಈ ಭಾಗದ ಮಕ್ಕಳಿಗೆ ಉತ್ತಮ ಭವಿಷ್ಯವಿದೆ. ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ರಾಜ್ಯ ಸರ್ಕಾರವು ಬದ್ಧವಾಗಿದೆ.ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಭಿವೃದ್ಧಿಯ ವಿಷಯದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಸೇರಿ ಕಾರ್ಯ ಪ್ರವೃತ್ತರಾಗಬೇಕಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ದಕ್ಷತೆಯಿಂದ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಡಾ.ಶಿವರಾಜ ಪಾಟೀಲ್, ಬಸನಗೌಡ ದದ್ದಲ್ , ಎಂಎಲ್ಸಿ ಶರಣಗೌಡ ಪಾಟೀಲ ಬಯ್ಯಪುರ, ಎ.ವಸಂತಕುಮಾರ, ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ,ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಡಿಸಿ ನಿತೀಶ್ ಕೆ., ಜಿಪಂ ಸಿಇಓ ಈಶ್ವರ ಕುಮಾರ ಕಾಂದೂ, ಎಸ್ಪಿ ಪುಟ್ಟಮಾದಯ್ಯ ಎಂ, ಪಾಲಿಕೆಯ ಆಯುಕ್ತ ಜುಬಿನ್ ಮೊಹಪಾತ್ರ ಸೇರಿ ಅನೇಕರು ಇದ್ದರು.

 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net