ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿಯದ್ದು ಕರ್ಣನ ಪರಿಸ್ಥಿತಿ; ಹೈಕ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಪನ್ನರಾಜ ಅಭಿಪ್ರಾಯ

170920 Ballari 73rd Kalyana Karnataka Festival
ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಕೇಂದ್ರದ ಮಾಜಿ ಗೃಹ ಸಚಿವ, ಕಲ್ಯಾಣ ಕರ್ನಾಟಕ ವಿಮೋಚನೆಯ ರೂವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಶಾಸಕ ಜಿ.ಸೋಮಶೇಖರ ರೆಡ್ಡಿ, ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲ್ ಅದಾವತ್ ಹಾಜರಿದ್ದರು.
Published on

ಬಳ್ಳಾರಿ: ಕಲ್ಯಾಣ ಕರ್ನಾಟಕ ಆರು ಜಿಲ್ಲೆಗಳನ್ನು ಒಳಗೊಂಡಿದೆ. ಕುಂತಿಯ ಆರು ಪುತ್ರರಲ್ಲಿ ಕರ್ಣನಂತೆ ಬಳ್ಳಾರಿಯ ಪರಿಸ್ಥಿತಿಯಾಗಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಎಸ್.ಪನ್ನರಾಜ ಅಭಿಪ್ರಾಯಪಟ್ಟರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆಯಲ್ಲಿ ಉಪನ್ಯಾಸ ನೀಡಿದರು. 1990ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯಾದಾಗ ಬಳ್ಳಾರಿ ಜಿಲ್ಲೆ ಸೇರ್ಪಡೆ ಮಾಡಿರಲಿಲ್ಲ. ಹೋರಾಟದ ಬಳಿಕ ಸೇರ್ಪಡೆ ಆಯಿತು ಎಂದರು. 1963ರಿಂದ ಬಳ್ಳಾರಿ ಜಿಲ್ಲೆ ಕಲಬುರಗಿ ವಿಭಾಗದ ಆಡಳಿತಕ್ಕೆ ಒಳಪಟ್ಟಿದೆ. ಆದರೂ, ಅಭಿವೃದ್ಧಿ ವಿಚಾರದಲ್ಲಿ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕ ಉತ್ಸವ ನಮಗೆ ಸಂಭ್ರಮ ತಂದಿದೆಯಾ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ಜನಪ್ರತಿನಿಧಿಗಳು ಭಾಷಣ ಮಾಡಿ ಮನೆಗೆ ಹೋಗುವ ಬದಲಿಗೆ ಮೂರು ತಿಂಗಳಿಗೊಮ್ಮೆ ಅಭಿವೃದ್ಧಿ ಬಗ್ಗೆ ಚರ್ಚಿಸಬೇಕೆಂದು ಎಸ್.ಪನ್ನರಾಜ ಹೇಳಿದರು.

ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಧ್ವಜಾರೋಹಣ ನೆರವೇರಿಸಿದರು. ಎಂಎಲ್ಸಿಗಳಾದ ಅಲ್ಲಂ ವೀರಭದ್ರಪ್ಪ, ಕೆ.ಸಿ.ಕೊಂಡಯ್ಯ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲ್ ಅದಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಇತರರಿದ್ದರು.

ನೇರ ಪ್ರಸಾರವಿಲ್ಲ
ಕಲ್ಯಾಣ ಕರ್ನಾಟಕ ಉತ್ಸವ ಕಾರ್ಯಕ್ರಮವನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ನೇರ ಪ್ರಸಾರ ಮಾಡಲು ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗುರುವಾರ ನೇರ ಪ್ರಸಾರ ಇರಲಿಲ್ಲ. ಅನುದಾನ ಸಮಸ್ಯೆಯಿಂದ ನೇರ ಪ್ರಸಾರ ಕೈಬಿಡಲಾಯಿತು ಎಂದು ಮೂಲಗಳು ತಿಳಿಸಿವೆ. ಕರೊನಾ ಕಾರಣಕ್ಕೆ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಪಾಲ್ಗೊಂಡಿರಲಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಬಜೆಟ್‌ನಲ್ಲಿ ನಿಗದಿಯಂತೆ 1500 ಕೋಟಿ ರೂ. ಅನುದಾನ ಬಿಡುಗಡೆಯಾಗುತ್ತಿಲ್ಲ. ಬಿಡುಗಡೆಯಾದ ಅನುದಾನದಲ್ಲೂ ಬಳ್ಳಾರಿ ಜಿಲ್ಲೆಗೆ ತಾರತಮ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಿ ಅನುದಾನವನ್ನು ಸಮವಾಗಿ ಹಂಚಿಕೆ ಮಾಡಬೇಕು. | ಜಿ.ಸೋಮಶೇಖರ ರೆಡ್ಡಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net