

ಬೂದಿಕೊಟೆ: ಮದುವೆ ಸೇರಿ ಇತರೆ ಶುಭ ಕಾರ್ಯಗಳನ್ನು ನಡೆಸಲು ಬಡವರಿಗೆ ಅನುಕೂಲವಾಗಲೆಂದು ಮುಜರಾಯಿ ಇಲಾಖೆಯಿಂದ ಪಟ್ಟಣದ ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಛತ್ರದ ಆವರಣದಲ್ಲಿ ನಿರ್ಮಿಸಲಾಗುತ್ತಿರುವ ಕಲ್ಯಾಣ ಮಂಟಪ ಅನುದಾನ ಸೇರಿ ಇತರೆ ಕಾರಣಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಬಂಗಾರಪೇಟೆ ಪಟ್ಟಣದ ಹೃದಯ ಭಾಗದಲ್ಲಿ ಜನಸಾಮಾನ್ಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕಾಲವಾಗಲೆಂದು ಹಲವು ವರ್ಷಗಳ ಹಿಂದೆ ರಾವ್ ಬಹದ್ದೂರ್ ಎಲೆ ಮಲ್ಲಪ್ಪ ಶೆಟ್ಟರು ಧರ್ಮಛತ್ರ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯ ನಿರ್ಮಿಸಿದ್ದರು. ಕಾಲ ಕ್ರಮೇಣ ಧರ್ಮಛತ್ರ ಹಾಗೂ ವಿದ್ಯಾರ್ಥಿನಿಲಯ ಶಿಥಿಲಾವಸ್ಥೆ ತಲುಪಿದ ಕಾರಣ ಕಟ್ಟಡವನ್ನು ನೆಲಸಮ ಮಾಡಿದ ಧಾರ್ಮಿಕ ದತ್ತಿ ಇಲಾಖೆ ಸುಸಜ್ಜಿತ ಕಲ್ಯಾಣ ಮಂಟಪ ನಿರ್ಮಿಸಲು ಮುಂದಾಗಿದೆ. ಬಡವರಿಗೆ ಕಾರ್ಯಕ್ರಮ ಆಯೋಜಿಸಲು ಮಂಟಪ ನಿರ್ಮಿಸುವ ಉದ್ದೇಶದಿಂದ 30 ಗುಂಟೆ ಜಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆಯು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಸುಮಾರು 2.31 ಕೋಟಿ ರೂ. ವೆಚ್ಚದಲ್ಲಿ ಕಲ್ಯಾಣ ಮಂಟಪ ನಿಮಾರ್ಣಕ್ಕೆ ಕಳೆದ ಹಲವು ವರ್ಷಗಳ ಹಿಂದೆ ಚಾಲನೆ ನೀಡಲಾಗಿತ್ತು. ಅದರಂತೆ ಮೊದಲ ಹಂತದ ಕಾಮಗಾರಿ ಕೈಗೊಳ್ಳಲು 2017ರಲ್ಲಿ 1.70 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿತ್ತು. ಅದರಂತೆ ಮೊದಲ ಹಂತದ ಕಾಮಗಾರಿಗೆ 98 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದ ಕಾರಣ ಕಾಮಗಾರಿ ಆರಂಭಿಸಲಾಗಿತ್ತು.
ಆದರೆ, ಅಂದಿನ ದರಪಟ್ಟಿಗೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದು ಹೆಚ್ಚುವರಿ 28 ಲಕ್ಷ ರೂ. ಸೇರಿಸಿ ಒಟ್ಟು 1.98 ಕೋಟಿಯ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದ ಕಾರಣ ಸಂಸ್ಥೆಯ ನಿಧಿಯಿಂದ 28 ಲಕ್ಷ ರೂ.ಭರಿಸಲು ಅನುಮತಿ ನೀಡಲು ಹಾಗೂ ಅಂದಾಜುಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲು ಕೋರಲಾಗಿತ್ತು. ಎರಡನೆಯ ಹಂತದ ಕಾಮಗಾರಿಗಳಾದ ನೆಲಮಹಡಿ ಛಾವಣಿ ನಿಮಾರ್ಣ, ಮೊದಲ ಮಹಡಿ ಮತ್ತು ಇನ್ನಿತರ ಕಾಮಗಾರಿಗಳು ಸೇರಿ ಮೊದಲ ಅಂತಸ್ತಿನ ಕಾಮಗಾರಿ ನೆಲಮಹಡಿ ಮತ್ತು ತಳಮಹಡಿಯ ಉಳಿಕೆ ಕಾಮಗಾರಿಗಳು ಸೇರಿ ಒಟ್ಟು 2.31 ಕೋಟಿ ರೂ.ಅಂದಾಜು ಪಟ್ಟಿಗೆ ಅನುದಾನ ಬಿಡುಗಡೆ ಮಾಡಲು ಕೋರಲಾಗಿದೆ. ಹೀಗೆ ಹಲವು ಕಾರಣಗಳು ಸೇರಿ ಅನುದಾನ ಕೊರತೆಯಿಂದ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಪಟ್ಟಣದ ಜನರ ಆಸೆ ಈಡೇರದೆ ಹಾಗೇ ಉಳಿದಿದೆ.
ಕಾಮಗಾರಿ ಪೂರ್ಣಗೊಳಿಸದ ಕಾರಣ ಈಗ ಅದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಆದ್ದರಿಂದ ಕಲ್ಯಾಣ ಮಂಟಪದ ಕಾಮಗಾರಿಯನ್ನು ಪೂರ್ಣಗೊಳಿಸಿ ಆದಷ್ಟು ಬೇಗ ಬಡ ಜನರ ಅನುಕೂಲಕ್ಕೆ ಲೋಕಾರ್ಪಣೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಲ್ಯಾಣ ಮಂಟಪ ಕಾಮಗಾರಿ ಪೂರ್ಣಗೊಳ್ಳದೆ ಸ್ಥಗಿತಗೊಂಡಿರುವುದರಿಂದ ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಾಮಗಾರಿಯನ್ನು ಬೇಗ ಪೂರ್ಣಗೊಳಿಸದಿದ್ದರೆ ಈಗ ಆಗಿರುವ ಕೆಲಸವನ್ನು ಮತ್ತೆ ಮುಂದುವರೆಸಲು ಯೋಗ್ಯವಲ್ಲದಂತಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ನಷ್ಟ ಉಂಟಾಗಲಿದೆ.
- ರಮೇಶ್, ಬಂಗಾರಪೇಟೆ
ಕಲ್ಯಾಣ ಮಂಟಪ ನಿಮಾರ್ಣಕ್ಕೆ ಅನುದಾನದ ಕೊರತೆ ಸೇರಿ ಕೆಲವು ತಾಂತ್ರಿಕ ತೊಡಕುಗಳು ಉಂಟಾಗಿದ್ದ ಕಾರಣ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ತಾಂತ್ರಿಕ ಸಮಸ್ಯೆಗಳು ಬಗೆಹರಿದಿದ್ದು, ಅನುದಾನ ಬಿಡುಗಡೆಯಾಗಿದೆ. ಲೋಕೋಪಯೋಗಿ ಇಲಾಖೆಗೆ ಅನುದಾನ ನೀಡಿ ಕಾಮಗಾರಿ ಮುಂದುವರೆಸಲಾಗುತ್ತದೆ.
- ಸೆಲ್ವಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ದಾರ್ಮಿಕ ದತ್ತಿ ಇಲಾಖೆ