

ಭಾಲ್ಕಿ: ಕಲ್ಯಾಣ ಕರ್ನಾಟಕ ವಿಮೋಚನೆಗಾಗಿ ಹೋರಾಟ ಮಾಡಿದ ಮಹನೀಯರನ್ನು ಸ್ಮರಿಸುವ ದಿನ ಇದಾಗಿದೆ ಎಂದು ಸಾಹಿತಿ ಡಾ.ಕಾಶಿನಾಥ ಚಲವಾ ಹೇಳಿದರು.
ಪಟ್ಟಣದ ಪುರಭವನದಲ್ಲಿ ಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು, ಇಂದಿನ ಕಲ್ಯಾಣ ಕರ್ನಾಟಕ, ಅಂದಿನ ಹೈದರಾಬಾದ್ ಕರ್ನಾಟಕವಾಗಿತ್ತು. ಸ್ವಾತಂತ್ರ್ಯ ನಂತರವೂ ಒಂದು ವರ್ಷಕಾಲ ನಿಜಾಮನ ಆಡಳಿತದಲ್ಲಿದ್ದ ಹೈಕ ಭಾಗವನ್ನು ಸರ್ದಾರ್ ವಲ್ಲಭಭಾಯಿ ಪಟೇಲರ ಮುಂದಾಳತ್ವದಲ್ಲಿ ಪೊಲೀಸ್ ಆಕ್ಷನ್ ಮೂಲಕ ಸ್ವತಂತ್ರ ಭಾರತದಲ್ಲಿ ವಿಲೀನ ಗೊಳಿಸಲಾಯಿತು. ಈ ಒಂದು ವರ್ಷದಲ್ಲಿ ನಡೆದ ಘಟನೆಗಳಲ್ಲಿ, ಸ್ವತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಭಾಗದ ಮಹನೀಯರನ್ನು ನಾವು ಸ್ಮರಿಸಬೇಕಾದ ಕ್ಷಣ ಇದಾಗಿದೆ ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಕಾಂತ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಿ ಪ್ರಾಸ್ತಾವಿಕ ಮಾತನಾಡಿದರು.
ವಿಶ್ವಕರ್ಮ ದಿನಾಚರಣೆ ನಿಮಿತ್ತ ಡಾ.ಇಂದ್ರಜೀತ ಪಾಂಚಾಳ ವಿಶೇಷ ಉಪನ್ಯಾಸ ಮಂಡಿಸಿದರು. ಸ್ವಾತಂತ್ರ್ಯ ಯೋಧರ ಕುಟುಂಬಸ್ಥರು ಮತ್ತು ಜಿಲ್ಲಾ, ರಾಜ್ಯ ಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದ ತಾಲೂಕು ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸ್ವಾತಂತ್ರಯೋಧ ರಾಮರಾವ ಕುಲಕರ್ಣಿ, ಹೀರಾಚಂದ ವಾಘಮಾರೆ, ಪುರಸಭೆ ಅಧ್ಯಕ್ಷೆ ಶಶಿಕಲಾ ಅಶೋಕ ಸಿಂದನಕೇರೆ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಗ್ರೇಡ್-೨ ತಹಸೀಲ್ದಾರ್ ಪಲ್ಲವಿ ಬೆಳಕೆರೆ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ವಿಶ್ವಕ್ರಾಂತಿ ದಿವ್ಯಪೀಠದ ಅಧ್ಯಕ್ಷ ಓಂಪ್ರಕಾಶ ರೊಟ್ಟೆ ಇತರರಿದ್ದರು.
ಮಲ್ಲಿಕಾರ್ಜುನ ವಡ್ಡನಕೇರಿ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ವಂದಿಸಿದರು.