

ರಾಯಚೂರು: ಕಲ್ಯಾಣ ಕರ್ನಾಟಕ ಭಾಗ ಐತಿಹಾಸಿಕವಾಗಿ ಸಂಪದ್ಭರಿತವಾಗಿದ್ದು, ಈ ಭಾಗರದ ಐತಿಹಾಸಿಕ ಹಿನ್ನಲೆಯ ಪರಿಕಲ್ಪನೆಯನ್ನಿಟ್ಟುಕೊಂಡು ಕನ್ನಡ ಸಿನೆಮಾಗಳನ್ನು ತಯಾರಿಸಬೇಕಾಗಿದೆ ಎಂದು ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ ಹೇಳಿದರು.
ಸ್ಥಳೀಯ ರಾಯಚೂರು ವಿವಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿರುವ ಆಲೋಚನೆ ಹರಡಿಸಲು ಚಾರಿತ್ರಿಕ ಸಂಗತಿ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಬೇಕು ಎಂದರು.
ಭಾರತದ ಇತಿಹಾಸದ ಮೂಲಭೂತ ಸಮಸ್ಯೆ ಎಂದರೆ ಉದ್ದೇಶ ಬಿಟ್ಟು ವಿಷಯಗಳನ್ನು ವಿವರಿಸುತ್ತೇವೆ. ಇತಿಹಾಸಕಾರರು, ವಿಜ್ಞಾನಿಗಳು, ಸಾಮಾಜಿಕ ವಿಜ್ಞಾನಿಗಳು ಸೇರಿ ಓದಿನ ಚೌಕಟ್ಟನ್ನು ಬದಲಾಯಿಸಬೇಕು ಎಂದು ಹೇಳಿದರು.
ತುಮಕೂರು ವಿವಿ ಪ್ರಾಧ್ಯಾಪಕ ಪ್ರೊ.ಎಂ.ಕೋಟ್ರೇಶ ಮಾತನಾಡಿ, ಕಲ್ಯಾಣ ಕರ್ನಾಟಕದ ಚರಿತ್ರೆಯನ್ನು ದಾಖಲೆಯನ್ನಾಗಿಟ್ಟುಕೊಂಡು ಚರಿತ್ರೆ ಬಿಂಬಿಸುವ ಕೆಲಸವಾಗಬೇಕು. ಚರಿತ್ರೆ ಬರೆಯುವವರಿಗೆ ಸಂಸ್ಕೃತ ಮತ್ತು ಭಾಷಾ ಜ್ಞಾನವಿರಬೇಕು. ನಿರಂತರ ಕಲಿಕೆ, ಪರಿಶ್ರಮದಿಂದ ಕೆಲಸ ಮಾಡಿದರೆ ವಿದ್ವತ್ ತಾನಾಗಿಯೇ ಬರುತ್ತದೆ ಎಂದರು.
ಕಲಬುರಗಿ ವಿಭಾಗೀಯ ಪತ್ರಾಗಾರ ಕಚೇರಿ ಹಿರಿಯ ಸಹಾಯಕ ನಿರ್ದೇಶಕ ಡಾ.ವೀರಶೆಟ್ಟಿ ಮಾತನಾಡಿ, ಇತಿಹಾಸವನ್ನು ದಾಖಲೆ ಮಾಡುವುದು, ಸಂರಕ್ಷಣೆ, ಸಾರ್ವಜನಿಕರಿಗೆ ಅದರ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ. ನಿಜಾಮರ ಕುರಿತ ಅಂದಾಜು 2.46 ಲಕ್ಷ ಪುಟಗಳಷ್ಟು ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಈ ಭಾಗದ ಸಂಶೋಧಕರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿ ವೌಲ್ಯಮಾಪನ ಕುಲಸಚಿವ ಪ್ರೊ.ಯರ‌್ರಿಸ್ವಾಮಿ, ವಿವಿಧ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎಸ್.ಬಿರಾದರ, ಡಾ.ರಾಘವೇಂದ್ರ ತ್ತೇಪುರ, ಪ್ರೊ.ಸಿ.ಎಸ್.ಪಾರ್ವತಿ, ಪ್ರೊ.ಪಿ.ಭಾಸ್ಕರ್, ರೇಖಾ ಪಾಟೀಲ್ ಉಪಸ್ಥಿತರಿದ್ದರು.