

ಅಳವಂಡಿ: ಗ್ರಾಮಗಳ ಅಭಿವೃದ್ಧಿ ಗಾಂಧೀಜಿಯ ಕನಸಾಗಿದ್ದು, ಅದನ್ನು ನನಸಾಗಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಜಿಲ್ಲಾ ನಿರ್ದೇಶಕ ವಿ.ಎಂ.ಭೂಸನೂರಮಠ ಹೇಳಿದರು.
ಭೈರಾಪುರ ಗ್ರಾಮದ ಶ್ರೀರಾಮ ಮಂದಿರದ ಆವರಣದಲ್ಲಿ ಭಾನುವಾರ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಶ್ರೇಯೋಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಘವು ನಿರುದ್ಯೋಗಿ ಯುವಕರಿಗೆ ತಾಂತ್ರಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ, ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ನಿರ್ಮಾಣ, ರೈತರಿಗೆ ಬೀಜ ವಿತರಣೆ, ಜಲ ಜಾಗೃತಿ, ಪರಿಸರ ರಕ್ಷಣೆ, ವಿವಿಧ ಸಸಿಗಳ ವಿತರಣೆ ಯೋಜನೆಗಳನ್ನು ಜಾರಿಗೊಳಿಸಿದೆ. ಆರೋಗ್ಯ, ಶಿಕ್ಷಣ, ಕಲೆ, ಸಂಸ್ಕೃತಿ, ಕೃಷಿ ಮುಂತಾದ ಯೋಜನೆಗಳನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮೋಹನ ಭಟ್, ಪ್ರಮುಖರಾದ ಮಲ್ಲಾರಭಟ್ ಜೋಶಿ, ಎಲ್.ಡಿ.ಜೋಶಿ, ವೆಂಕನಗೌಡ ಪಾಟೀಲ್, ಗುರುರಾಜ ಪಾಟೀಲ್, ದೇವಪ್ಪ ಕಟ್ಟಿಮನಿ, ವೆಂಕಟೇಶ, ವೀರಯ್ಯ, ನಿಂಗಪ್ಪ, ಶರಣಪ್ಪ ಸಿಂದೋಗಿ, ವೀರೇಶ ಹಾಲಗುಂದಿ, ಮಂಜುನಾಥ, ಪರಶುರಾಮ, ಉಮೇಶ, ವಿಶ್ವನಾಥ ವದಗನಾಳ, ವಿಜಯಲಕ್ಷ್ಮೀ ಇತರರಿದ್ದರು.