

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಒಂದೆಡೆ ಅರಣ್ಯ ಇಲಾಖೆಯ ತಡೆಯಿಂದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದರೆ, ಮತ್ತೊಂದೆಗೆ ಘನವಾಹನಗಳ ಸಂಚಾರದಿಂದ ಡಾಂಬರು ಕಿತ್ತು ಬಂದಿದೆ. ಕಲ್ಯಾ ಮಲ್ಲಯಬೆಟ್ಟಿನಿಂದ ಕುಂಟಾಡಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಜಲ್ಲಿಕಲ್ಲುಗಳು ಗೋಚರಿಸುತ್ತಿದ್ದು ಬೃಹತ್ ಹೊಂಡ ನಿರ್ಮಾಣವಾಗಿ ವಾಹನ, ಪಾದಚಾರಿಗಳ ಸಂಚಾರಕ್ಕೂ ಕಷ್ಟವಾಗಿದೆ.
ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಯಬೆಟ್ಟು ಮಾರ್ಗವಾಗಿ ಕುಂಟಾಡಿ, ಪಳ್ಳಿ, ಕಾರ್ಕಳವನ್ನು ಸಂಪರ್ಕಿಸಲು ಇದು ಬಹು ಹತ್ತಿರದ ಮಾರ್ಗವಾಗಿದ್ದರೂ ಹಲವು ವರ್ಷಗಳಿಂದಲೂ ಜನರ ಉಪಯೋಗಕ್ಕೆ ಬಾರದಂತಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ಜಲ್ಲಿ ಕಲ್ಲಿನ ರಾಶಿ ಹಾಗೂ ಹೊಂಡಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಸಂಚಾರವೇ ಅಸಾಧ್ಯ ಎನ್ನುವಷ್ಟರ ಮಟ್ಟಕ್ಕೆ ತಲುಪಿದೆ. ಹಾಳೆಕಟ್ಟೆ, ಕಲ್ಯಾ ಪರಿಸರದ ನಾಗರಿಕರು ಸ್ಥಳೀಯ ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಲು ಹಾಗೂ ಅಗತ್ಯ ಸಂದರ್ಭದಲ್ಲಿ ಕಾರ್ಕಳ ಮತ್ತು ಕುಂಟಾಡಿಯ ದೇವಾಲಯವನ್ನು ಸಂಪರ್ಕಿಸಲು ಇದೇ ಪ್ರಮುಖ ರಸ್ತೆಯಾಗಿದೆ. ರಸ್ತೆ ದುರಸ್ತಿ ಮಾಡಿ ಎಂಬ ಗ್ರಾಮಸ್ಥರ ಬಹುಕಾಲದ ಬೇಡಿಕೆ ಇನ್ನೂ ಈಡೇರಿಲ್ಲ.
ಮಲ್ಲಯಬೆಟ್ಟು ಕುಂಟಾಡಿ ಸಂಪರ್ಕಿಸುವ ರಸ್ತೆ ಕಾಮಗಾರಿ ಆರಂಭಗೊಂಡಾಗ ಇಲ್ಲಿನ ನಿವಾಸಿಗಳು ಸಂಭ್ರಮಿಸಿದರು. ಆದರೆ ಆ ಖುಷಿ ಬಹು ಸಮಯ ಉಳಿಯಲಿಲ್ಲ. ಅರಣ್ಯ ಇಲಾಖೆಯಿಂದ ರಸ್ತೆ ನಿರ್ಮಾಣಕ್ಕೆ ತಡೆ ಬಂದ ಪರಿಣಾಮ ಕಾಮಗಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತಾಯಿತು. ರಸ್ತೆಯಲ್ಲಿ ಹರಡಿರುವ ಜಲ್ಲಿಕಲ್ಲುಗಳ ಮಧ್ಯೆಯೇ ಗ್ರಾಮಸ್ಥರು ಹಲವು ವರ್ಷಗಳಿಂದ ಸಂಚರಿಸುತ್ತಿದ್ದರೂ ಸಂಬಂಧಪಟ್ಟವರು ಜಾಣಕುರುಡು ಪ್ರದರ್ಶಿಸುತ್ತಿದ್ದು, ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿ ತೋರಿಲ್ಲ.
ಕಲ್ಯಾ, ಮಲ್ಲಯಬೆಟ್ಟು ಭಾಗದಲ್ಲಿ ಸಾಕಷ್ಟು ಕಲ್ಲುಕ್ವಾರಿ, ಜಲ್ಲಿ ಕ್ರಷರ್‌ಗಳಿದ್ದು ನಿತ್ಯವೂ ಲೋಡ್ ತುಂಬಿದ ಘನ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿರುವ ಪರಿಣಾಮ ರಸ್ತೆಯುದ್ದಕ್ಕೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ. ಈ ಭಾಗಕ್ಕೆ ಬಸ್ ಸೌಲಭ್ಯವಿಲ್ಲದ ಕಾರಣ ಜನರು ರಿಕ್ಷಾ ಇನ್ನಿತರ ಬಾಡಿಗೆ ವಾಹನ ಅವಲಂಬಿಸಿದ್ದಾರೆ. ಆದರೆ ಹದಗಟ್ಟೆ ರಸ್ತೆಯಲ್ಲಿ ಬಾಡಿಗೆಗೆ ಬರಲು ಅವರೂ ಹಿಂದೇಟು ಹಾಕುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ವಾಹನಗಳು ಸಿಗದೆ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದು ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬಿದ್ದಿರುವ ನಿದರ್ಶನಗಳೂ ನಡೆದಿವೆ.
ಹಲವು ದಶಕಗಳಿಂದ ಕನಸಿನ ರಸ್ತೆಯ ನಿರ್ಮಾಣ ಯಾವಾಗ ಎನ್ನುವ ಪ್ರಶ್ನೆ ಗ್ರಾಮಸ್ಥರಲ್ಲಿದೆ. ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಲ್ಯಾ ಪರಿಸರದ ಜನ ಕುಂಟಾಡಿ ಸಂಪರ್ಕಿಸಲು ಪರದಾಡುವಂತಾಗಿದೆ. ರಸ್ತೆಯ ಅಲ್ಲಲ್ಲಿ ನಿರ್ಮಾಣಗೊಂಡ ಬೃಹತ್ ಹೊಂಡಗಳಿಂದ ಬೇಸತ್ತ ಜನರು ಶೀಘ್ರವೇ ಡಾಂಬರೀಕರಣ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ರಸ್ತೆ ಸಂಪೂರ್ಣ ಹದಗೆಟ್ಟು ಹಲವು ವರ್ಷಗಳು ಕಳೆದರೂ ದುರಸ್ತಿ ಕಾಮಗಾರಿ ನಡೆದಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ನಿತ್ಯ ನರಕ ಯಾತನೆ ಪಡುವಂತಾಗಿದೆ. -ಸತೀಶ್, ಗ್ರಾಮಸ್ಥರು. ಅರಣ್ಯ ಇಲಾಖೆಯ ಅನುಮತಿ ಸಿಗದೆ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹಲವು ವರ್ಷಗಳು ಕಳೆದಿದೆ. ಇರುವ ಒಂದಿಷ್ಟು ಡಾಂಬರು ರಸ್ತೆಯಲ್ಲೂ ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. -ಪ್ರಕಾಶ್ ಶೆಟ್ಟಿ, ವಾಹನ ಸವಾರ