

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಜಾನುವಾರುಗಳಿಗೆ ತಗಲುವ ಮಾರಣಾಂತಿಕ ಕಾಲುಬಾಯಿ ಸೋಂಕು ನಿಯತ್ರಣಕ್ಕೆ ಶ್ರಮಿಸುತ್ತಿರುವ ಜಿಲ್ಲಾ ಪಶುಪಾಲನ ಇಲಾಖೆಗೆ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 5ನೇ ಸುತ್ತಿನಲ್ಲಿ 91,716 ಲಸಿಕಾಕರಣ ನಡೆಸಿದೆ.
ಹೈನುಗಾರರು ತಮ್ಮ ರಾಸುಗಳನ್ನು ಕಾಲುಬಾಯಿ ರೋಗೋದ್ರೇಕದಿಂದ ರಕ್ಷಿಸಲು ಈ ಲಸಿಕೆಯೇ ಏಕೈಕ ಮಾರ್ಗವಾಗಿರುವ ನಿಟ್ಟಿನಲ್ಲಿ ಜಿಲ್ಲಾ ಪಶುಪಾಲನಾ ಇಲಾಖೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಅಭಿಯಾನ ಮುಂದುವರೆಸಿದೆ. ಜಿಲ್ಲಾ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಸಹಯೋಗದಲ್ಲಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ.
ಮುಂಜಾನೆಯೇ ಸಿಬ್ಬಂದಿ ಸಿದ್ದ: ಜಿಲ್ಲೆಯಲ್ಲಿ ಬಿಸಿಲ ತಾಪ ಹೆಚ್ಚಿರುವ ಹಿನ್ನೆಲೆಯಲ್ಲಿ ಪಶುಪಾಲನ ಸಿಬ್ಬಂದಿ ಮುಂಜಾನೆ 5.30ರಷ್ಟರಲ್ಲೇ ಕರ್ತವ್ಯ ಆರಂಭಿಸುತ್ತಿದೆ. ಮುಂಜಾನೆಯೇ ಸಾಧ್ಯವಾದಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿ ಭರತ್ ಪಶುಧನ್ ಆ್ಯಪ್‌ನಲ್ಲಿ ಡೇಟಾ ನಮೂದಿಸುವ ಕೆಲಸ ಮಾಡುತ್ತಿದೆ.
ಕರುಗಳಿಗೆ ವಿಶೇಷ ಗಮನ: ಜಿಲ್ಲೆಯಲ್ಲಿ 3 ರಿಂದ 6 ತಿಂಗಳ ಹಸು ಹಾಗೂ ಎಮ್ಮೆ ಕರುಗಳಿಗೆ ಲಸಿಕೆ ಹಾಕುವಲ್ಲಿ ವಿಶೇಷ ಗಮನ ನೀಡಲಾಗುತ್ತಿದೆ. ಮೊದಲ ಸುತ್ತಿನ ಲಸಿಕೆ ಬಳಿಕ 28 ದಿನಗಳ ನಂತರ ಬೂಸ್ಟರ್ ಲಸಿಕೆ ಹಾಕುವ ಮೂಲಕ ಮಾರಣಾಂತಿಕ ಕಾಯಿಲೆಯಿಂದ ಜಾನುವಾರುಗಳ ರಕ್ಷಣೆಗೆ ಇಲಾಖೆ ಶ್ರಮಿಸುತ್ತಿದೆ.ಜಿಲ್ಲೆಯಲ್ಲಿ 2871 ಹಸು ಕರು ಹಾಗೂ 161 ಎಮ್ಮೆ ಕರುಗಳಿದ್ದು, ಮೊದಲ ಸುತ್ತಿನ ಲಸಿಕಾರಣ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತೀ ಗ್ರಾಮವಾರು ಮೈಕ್ರೋಪ್ಲಾನ್ ಮಾಡಲಾಗಿದ್ದು, ಈ ಲಸಿಕಾ ಕಾರ್ಯಕ್ರಮದ ಕುರಿತು ರೈತರಿಗೆ ಮನವರಿಕೆ ಮಾಡಿ ಕೊಡುವ ಸಲುವಾಗಿ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಮತ್ತು ಕರಪತ್ರಗಳನ್ನು ಮುದ್ರಿಸಿ ಜಿಲ್ಲೆಯ ಪ್ರತಿ ಪಶುವೈದ್ಯಕೀಯ ಸಂಸ್ಥೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಆವರಣದಲ್ಲಿ ಪ್ರದರ್ಶಿಸಲಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣದ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ.
91742 ರಾಸುಗಳು: ಹೊಸಕೋಟೆ, ನೆಲಮಂಗಲ, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ಸೇರಿ ಜಿಲ್ಲೆಯಲ್ಲಿ 91742 ರಾಸುಗಳಿದ್ದು, ಇದರಲ್ಲಿ 5782 ಕರುಗಳಿವೆ. ಗರ್ಭಧರಿಸಿರುವ ರಾಸುಗಳು ಹಾಗೂ ಜ್ವರ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವ ರಾಸುಗಳಿಗೆ ತಾತ್ಕಾಲಿಕವಾಗಿ ಲಸಿಕೆ ಹಾಕುವುದಿಲ್ಲ. ಬಳಿಕ ಇವುಗಳ ಡೇಟಾ ಆಧಾರದಲ್ಲಿ ಲಸಿಕೆ ಹಾಕಲಾಗುವುದು ಎಂದು ಅಧಿಕಾರಿಗಳುತ ತಿಳಿಸಿದ್ದಾರೆ.
ಹೈನುಗಾರರಿಂದ ಮೀನಮೇಷ: ಕಾಲುಬಾಯಿ ಲಸಿಕೆ ಹಾಕಿಸುವುದರಿಂದ ಜಾನುವಾರುಗಳಿಗೆ ಜ್ವರ ಬರುತ್ತದೆ, ಅರೋಗ್ಯ ಏರುಪೇರಾಗುತ್ತದೆ ಇದರಿಂದ ಹಾಲಿನ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ ಎಂಬ ಕಲ್ಪನೆಯಿಂದ ಹಲವು ಹೈನುಗಾರರು ಲಸಿಕೆ ಹಾಕಿಸಲು ಮೀನಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಸಿಕೆಗೂ ಜಾನುವಾರು ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ. ಲಸಿಕೆ ಹಾಕಿದ ಎರಡ್ಮೂರು ದಿನ ಜ್ವರ ಕಾಣಿಸಿಕೊಳ್ಳುವುದರಿಂದ ಹಾಲಿನ ಪ್ರಮಾಣ ಕಡಿಮೆಯಾಗಬಹುದು ನಂತರ ಮತ್ತೆ ಸರಿಹೋಗುತ್ತದೆ. ಆದರೆ ಮಾರಣಾಂತಿಕ ಕಾಯಿಲೆ ತಡೆದು ಇದು ರಾಮಬಾಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲುಬಾಯಿ ರೋಗ ರಾಸುಗಳಿಗೆ ಮಾರಣಾಂತಿರವಾಗಿದ್ದು ಲಸಿಕೆ ಮೂಲಕ ರಾಸುಗಳ ಆರೋಗ್ಯ ರಕ್ಷಿಸಬಹುದಾಗಿದೆ ಈ ಹಿನ್ನೆಲೆಯಲ್ಲಿ ರೈತಾಪಿ ಜನರು ಯಾವುದೇ ಗೊಂದಲಕ್ಕೆ ಸಿಲುಕದೆ ಪಶು ವೈದ್ಯಾಧಿಕಾರಿಗಳ ಸಲಹೆಯಂತೆ ರಾಸುಗಳಿಗೆ ಲಸಿಕೆ ಹಾಕಿಸಬೇಕು ಲಸಿಕೆ ಹಾಕುವುದರಿಂದ ಜಾನುವಾರುಗಳ ಆರೋಗ್ಯದಲ್ಲೇ ಏರುಪೇರಾಗುತ್ತದೆ, ಹಾಲಿನ ಉತ್ಪನ್ನ ತಗ್ಗುತ್ತದೆ ಎಂಬುದೆಲ್ಲ ತಪ್ಪು ಕಲ್ಪನೆ. ಯಾವುದೇ ಪೂರ್ವಾಪರ ಚಿಂತೆ ಮಾಡದೆ ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸಬೇಕು.
ಡಾ.ಜಗದೀಶ್, ಉಪನಿರ್ದೇಶಕ ಪಶುಪಾಲನಾ ಇಲಾಖೆ
ರಾಸುಗಳನ್ನು ಕಾಲುಬಾಯಿ ಸೋಂಕಿನಿಂದ ರಕ್ಷಿಸಲು ಈ ಲಸಿಕೆಯೇ ಏಕೈಕ ಮಾರ್ಗವಾಗಿದ್ದು ಪ್ರತಿ ಹೈನುಗಾರರು ತಪ್ಪದೆ ರಾಸುಗಳಿಗೆ ಲಸಿಕೆ ಹಾಕಿಸಬೇಕು. ದೇವನಹಳ್ಳಿ ತಾಲೂಕಿನಲ್ಲಿ ಈವರೆಗೆ 19444 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು, ಏ.30ರೊಗಳಗೆ ತಾಲೂಕಿನ ಎಲ್ಲ ರಾಸುಗಳಿಗೆ ಲಸಿಕೆ ಹಾಕುವ ಗುರಿಯೊಂದಿಗೆ ಕಾರ್ಯಕ್ರಮ ರೂಪಿಸಲಾಗಿದೆ. ಪಶುಪಾಲನ ಇಲಾಖೆ, ಹಾಗೂ ಬಿಲೂರು ಹಾಲು ಉತ್ಪಾದಕರ ಸಂಘದ ಸಹಯೋಗದಲ್ಲಿ ಲಸಿಕಾರಣ ನಡೆಸಲಾಗುತ್ತಿದೆ.
ಡಾ.ಅನಿಲ್‌ಕುಮಾರ್, ಪಶುಪಾಲನಾ ಅಧಿಕಾರಿ ದೇವನಹಳ್ಳಿ