ದಂಡೆಗೆ 'ತಡೆ'ಬೇಲಿ ಹಾಕೋರ್ಯಾರು?

UDP-25-8-Kalsanka
ಉಡುಪಿಯ ಕಲ್ಸಂಕ ಸರ್ಕಲ್​ನಿಂದ ಶ್ರೀಕೃಷ್ಣ ಮಠದ ವಾಹನ ಪಾರ್ಕಿಂಗ್​ ಪ್ರದೇಶ ಸಂಪರ್ಕಿಸುವ ಅಪಾಯಕಾರಿ ರಸ್ತೆ.
Published on

ಕಲ್ಸಂಕ ಮಾರ್ಗದಲ್ಲಿ ಸಂಚಾರ ಅಪಾಯ | ವಾಹನ ಚಾಲಕರಿಗೆ ಜೀವಭಯ

ಪ್ರಶಾಂತ ಭಾಗ್ವತ, ಉಡುಪಿ
ನಗರದ ಹೃದಯ ಭಾಗದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಲ್ಸಂಕ ಸರ್ಕಲ್​ನಿಂದ ಶ್ರೀಕೃಷ್ಣ ಮಠದ ರಾಜಾಂಗಣ ಹಾಗೂ ಯಾತ್ರಿಕರ ವಾಹನ ನಿಲುಗಡೆಗೆ ತೆರಳುವ ರಸ್ತೆ ಮಾರ್ಗ ಅಪಾಯಕಾರಿಯಾಗಿ ಪರಿಣಮಿಸಿದೆ.

ಈ ರಸ್ತೆ ಮಾರ್ಗದ ಎಡ ಹಾಗೂ ಬಲ ದಿಕ್ಕಿನಲ್ಲಿ ಇಂದ್ರಾಣಿ ನದಿಯ ಹರಿವು ಇದ್ದು, ರಸ್ತೆಯ ಪರಿಧಿಗೆ ಯಾವುದೇ ತಡೆಬೇಲಿ ಇಲ್ಲದಾಗಿದೆ. ಹೀಗಾಗಿ ಆಗಾಗ ವಾಹನಗಳು ಇಲ್ಲಿ ಉರುಳುವುದು ಸಾಮಾನ್ಯ ಎನ್ನುವಂತಾಗುತ್ತಿದೆ.

ಆಟೋ ಪಲ್ಟಿ

ಜೂ.23ರಂದು ಕೃಷ್ಣ ಮಠಕ್ಕೆ ಬಂದಿದ್ದ ಭಕ್ತರನ್ನು ಸಾಗಿಸುತ್ತಿದ್ದ ಆಟೋವೊಂದು ಚಾಲಕನ ನಿಯಂತ್ರಣ ತಪ್ಪಿ ಕೆಳಕ್ಕೆ ಉರುಳಿತ್ತು. ಆಟೋದಲ್ಲಿದ್ದ ನಾಲ್ವರು ಭಕ್ತರು ಗಾಯಗೊಂಡಿದ್ದರು. ಸ್ಥಳೀಯರ ಸಹಕಾರದಲ್ಲಿ ಕೆಳಕ್ಕೆ ಬಿದ್ದ ಜನರನ್ನು ಮೇಲಕ್ಕೆ ಎತ್ತಲಾಗಿತ್ತು. ಇಂತಹ ದುರ್ಘಟನೆ ಇಲ್ಲಿ ಪದೇಪದೆ ಸಂಭವಿಸುತ್ತಿದ್ದು, ಅಪಾಯಗಳಿಗೆ ಆಹ್ವಾನ ನೀಡುವ ಸ್ಥಳವಾಗಿ ಮಾರ್ಪಟ್ಟಿದೆ.

ಪಾದಚಾರಿ ಸಾವು

ಕಳೆದ ವರ್ಷವೂ ಸಹ ಚಾಲಕರ ನಿಯಂತ್ರಣ ತಪ್ಪಿ ಆಟೋ ಮತ್ತು ಕಾರು ನದಿಗೆ ಬಿದ್ದು ಯಾತ್ರಿಕರು ಮತ್ತು ಚಾಲಕರು ಸಣ್ಣ ಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು. ಬೈಕ್​ ಸವಾರರೂ ಸಹ ಬಿದ್ದೇಳುತ್ತಾರೆ. ಅನೇಕ ಪಾದಚಾರಿಗಳೂ ಸಹ ಆಯತಪ್ಪಿ ಬಿದ್ದ ಘಟನೆಯೂ ಸಂಭವಿಸಿದೆ. ಎರಡು ವರ್ಷದ ಹಿಂದೆ ಮಳೆಗಾಲದಲ್ಲಿ ಪಾದಚಾರಿಯೊಬ್ಬ ಇದೇ ಸ್ಥಳದಲ್ಲಿ ಬಿದ್ದು ಮೃತಪಟ್ಟ ಘಟನೆಯೂ ನಡೆದಿತ್ತು.

ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ

ಈ ರಸ್ತೆ ಉಡುಪಿ ಮಠದ ಪಾರ್ಕಿಂಗ್​ ಪ್ರದೇಶಕ್ಕೆ ಹೋಗುವ ಮಾರ್ಗವೂ ಆಗಿದ್ದು, ಯಾವಾಗಲೂ ವಾಹನ ದಟ್ಟಣೆ ಇರುತ್ತದೆ. ಶ್ರೀಕೃಷ್ಣ ಮಠಕ್ಕೆ ಬರುವ ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಯಾತ್ರಿಕರ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುತ್ತಿರುತ್ತದೆ. ಭಾರಿ ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ ಈ ಮಾರ್ಗದಲ್ಲಿ ತಡೆಬೇಲಿ ಅಳವಡಿಸಬೇಕಿದೆ ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತ ತಾರಾನಾಥ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.

ಈ ಹಿಂದೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಕಲ್ಸಂಕ ಇಂದ್ರಾಳಿ ನದಿ ದಂಡೆಗೆ ತಡೆಬೇಲಿ ನಿರ್ಮಿಸಲು ಸಂಬಂಧಪಟ್ಟವರಲ್ಲಿ ಆಗ್ರಹಿಸಿದ್ದೆವು. ಆದರೆ ಯಾರೂ ಈ ಸಮಸ್ಯೆಗೆ ಸ್ಪಂದಿಸಿಲ್ಲ. ಈಗಲಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ, ನಗರಾಡಳಿತ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಸ್ಥಳದಲ್ಲಿ ತಡೆಬೇಲಿ ನಿರ್ಮಿಸಿ, ಜೀವಹಾನಿ ತಪ್ಪಿಸಬೇಕು. ನಿತ್ಯಾನಂದ ಒಳಕಾಡು. ಸಂಚಾಲಕ, ಉಡುಪಿ ಜಿಲ್ಲಾ ನಾಗರಿಕ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net