

ಚಿಕ್ಕಮಗಳೂರು: ಶೃಂಗೇರಿಯ ಶ್ರೀಮಠದಲ್ಲಿ ಸೋಮವಾರ 11ನೇ ದಿನಕ್ಕೆ ಕಾಲಿಟ್ಟ ತುಂಗಾ ಪುಷ್ಕರ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ 8 ಗಂಟೆಗೆ ತುಂಗಾನದಿಗೆ ಕಲ್ಪೋಕ್ತಪೂಜೆ ನೆರವೇರಿತು.
ಬಳಿಕ ತುಂಗಾ ಕಲಶವನ್ನು ಉತ್ಸವದ ಮೂಲಕ ತಂದು ಕ್ಷೇತ್ರದ ಅಧಿದೇವತೆ ಶ್ರೀ ಶಾರದಾಂಬೆಗೆ ಅಭಿಷೇಕ ನೆರವೇರಿಸಲಾಯಿತು. ಬಳಿಕ ಶ್ರೀಶಂಕರ ಭಗವತ್ಪಾದರ ದೇಗುಲ ಹಾಗೂ ಶ್ರೀ ವಿದ್ಯಾಶಂಕರ ದೇವರ ಸನ್ನಿಧಿಯಲ್ಲಿ ಅಭಿಷೇಕ ನೆರವೇರಿಸಲಾಯಿತು.
ತುಂಗಾ ನದಿಯಲ್ಲಿ ಪುಣ್ಯಸ್ನಾನ
ನಸುಕಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರು ಪುಷ್ಕರೋತ್ಸವ ನಿಮಿತ್ತ ಗಾಂಧಿ ಮೈದಾನದ ಸಮೀಪದ ತುಂಗಾ ನದಿಯಲ್ಲಿ ಪುಣ್ಯಸ್ನಾನ ನೆರವೇರಿಸಿದರು.
ಬೆಳಗ್ಗೆ ಶ್ರೀ ಮಲಹಾನಿಕರೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಯತಿವರ್ಯರಿಂದ ಲಕ್ಷ ಬಿಲ್ವಾರ್ಚನೆ, ಶತರುದ್ರಾಭಿಷೇಕ ಹಾಗೂ ರುದ್ರಹೋಮ ಪೂರ್ಣಾಹುತಿ ನೆರವೇರಿತು. ರಾತ್ರಿ ಶ್ರೀಮಠದ ಜಗದ್ಗುರುಗಳ ಸಾನಿಧ್ಯದಲ್ಲಿ ಕಾರ್ತಿಕ ಹುಣ್ಣಿಮೆ ಪ್ರಯುಕ್ತ ಶ್ರೀ ಸ್ತಂಭ ಗಣಪತಿ, ಶ್ರೀ ಮಲಹಾನಿಕರೇಶ್ವರ ಸ್ವಾಮಿ, ಶ್ರೀಭವಾನಿ ಅಮ್ಮನವರ ಸನ್ನಿಧಿಯಲ್ಲಿ ರಂಗಪೂಜೆ, ಮಹಾಮಂಗಳಾರತಿ, ಅಷ್ಟವಧಾನ ಸೇವೆ ಜರುಗಿತು. ಬಳಿಕ ಧ್ವಜಸ್ತಂಭದ ಮುಂಭಾಗದಲ್ಲಿ ಪರಕಾಳಿ ಸುಡುವ ಸೇವೆ ನೆರವೇರಿತು.
ಲಕ್ಷ ದೀಪೋತ್ಸವಕ್ಕೆ ಶ್ರೀಗಳಿಂದ ಚಾಲನೆ
ಲಕ್ಷ ದೀಪೋತ್ಸವದ ಪ್ರಯುಕ್ತ ಪ್ರಥಮ ದೀಪವನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಬೆಳಗಿಸಿದರು. ಬಳಿಕ ಶ್ರೀ ಮಠದ ಸದ್ಭಕ್ತರು ಶ್ರೀ ಮಲಹಾನಿಕರೇಶ್ವರ ಸನ್ನಿಧಿಯಲ್ಲಿ ಹಾಗೂ ಶ್ರೀಮಠದ ಹೊರ ಪ್ರಾಂಗಣದಲ್ಲಿರುವ ದೇಗುಲ ಸಮೀಪ ಜೋಡಿಸಿಟ್ಟ ಸಹಸ್ರಾರು ಹಣತೆಗಳನ್ನು ಬೆಳಗಿಸಿ ಶ್ರದ್ಧಾಭಕ್ತಿ ಮೆರೆದರು.
ಉತ್ಸವ ಮೆರವಣಿಗೆ
ಶ್ರೀ ಮಲಹಾನಿಕರಾಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಶ್ರೀ ಶಾರದೆಯ ಸನ್ನಿಧಿಗೆ ತರಲಾಯಿತು. ದೇವಾಲಯ ಒಳ ಪ್ರಾಂಗಣದಲ್ಲಿ ರಥೋತ್ಸವ, ಮಹಾಮಂಗಳಾರತಿ, ಅಷ್ಟವಧಾನ ಸೇವೆ ನೆರವೇರಿತು. ತೆಪ್ಪೋತ್ಸವ ಮೊದಲು ಜಗದ್ಗುರುಗಳು ಶ್ರೀ ತುಂಗೆ, ಶ್ರೀ ವರಾಹಮೂರ್ತಿ ಹಾಗೂ ಶ್ರೀ ಶಾರದೆಯ ಸಾಲಂಕೃತಗೊಂಡ ವಿಗ್ರಹಗಳಿಗೆ ಪುಷ್ಪಾರ್ಚನೆಗೈದು ಪೂಜೆ ಸಲ್ಲಿಸಿದರು.
ಉತ್ಸವ ಮೂರ್ತಿಗಳಿಗೆ ಅಲಂಕಾರ
ಸಾಲಂಕೃತಗೊಂಡ ದೋಣಿಯಲ್ಲಿ ಕುಳ್ಳಿರಿಸಿದ ಶ್ರೀಭವಾನಿ ಮಲಹಾನಿಕರೇಶ್ವರ ಸ್ವಾಮಿ, ಶ್ರೀ ಶಾರದಾಂಬ, ಶ್ರೀ ಶಂಕರಾಚಾರ್ಯ ಹಾಗೂ ಶ್ರೀ ವಿದ್ಯಾಶಂಕರ ಸ್ವಾಮಿಯ ಉತ್ಸವಮೂರ್ತಿಗಳಿಗೆ ವಿವಿಧ ಆಭರಣಗಳು, ಪುಷ್ಪಾಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ತೆಪ್ಪೋತ್ಸವ ನೆರವೇರಿತು. ವೇದಘೋಷದೊಂದಿಗೆ ಶ್ರೀಮಠದ ಪುರೋಹಿತರು ತುಂಗಾರತಿ ಬೆಳಗಿದರು. ಮಹಿಳೆಯರು ತುಂಗೆಗೆ ಜ್ಯೋತಿಗಳನ್ನು ಸಮರ್ಪಿಸಿದರು.
ಗಮನ ಸೆಳೆದ ಕಾರಂಜಿ
ನರಸಿಂಹವನದ ಗುರುನಿವಾಸಕ್ಕೆ ಸಂಪರ್ಕ ಕಲ್ಪಿಸುವ ಶ್ರೀ ವಿದ್ಯಾತೀರ್ಥ ಸೇತುವೆಯ ವಿದ್ಯುತ್ ಅಲಂಕಾರ, ತುಂಗಾನದಿಯಲ್ಲಿ ಚಿಮ್ಮುವ ಬಣ್ಣಬಣ್ಣದ ಕಾರಂಜಿ, ತುಂಗಾರತಿ ನಡೆಯುವ ಸ್ಥಳದಲ್ಲಿ ಸಾಲಂಕೃತಗೊಂಡ ಮಂಟಪಗಳು ಗಮನ ಸೆಳೆದವು. ತಾಲೂಕಿನ ಸದ್ಭಕ್ತರು ಶ್ರದ್ಧಾಭಕ್ತಿಯಿಂದ ತೆಪ್ಪೋತ್ಸವದಲ್ಲಿ ಪಾಲ್ಗೊಂಡರು.
ಕಾರ್ತಿಕ ಮಾಸದ ಸೋಮವಾರ ಪ್ರಯುಕ್ತ ಗುರು ನಿವಾಸದಲ್ಲಿ ಮಧ್ಯಾಹ್ನ ಶ್ರೀಗಳವರು ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಂಗಳವಾರ ಶ್ರೀ ಶಾರದಾಂಬ ತೆಪ್ಪೋತ್ಸವ ಜರುಗಲಿದೆ.