

ಮಂಗಳೂರು: ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ವಿನೂತನ ಸೇವಾ ಸಂಸ್ಥೆಯಾಗಿರುವ ಕಲ್ಪತರು ಫೌಂಡೇಶನ್ ಉದ್ಘಾಟನೆಗೊಂಡಿತು.
ಈ ಸಂದರ್ಭ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಅಶಕ್ತರಿಗೆ ಆಸರೆಯಾಗಲು ಪ್ರಾರಂಭಗೊಂಡ ಕಲ್ಪತರು ಫೌಂಡೇಶನ್ ಸಹಾಯದ ಅಗತ್ಯವುಳ್ಳರ ಪಾಲಿನ ವರವಾಗಿದೆ. ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳನ್ನು ಜನಸಾಮಾನ್ಯರ ಬಳಿ ತಲುಪಿಸುವ ಸದುದ್ದೇಶದಿಂದ ಪ್ರಾರಂಭಗೊಂಡಿರುವ ಸಂಸ್ಥೆಗೆ ಶುಭವಾಗಲಿ ಎಂದರು.
ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜದ ಏಳಿಗೆಗಾಗಿ ಕಲ್ಪತರು ಫೌಂಡೇಶನ್ ಶ್ರಮಿಸುವುದು ಉತ್ತಮ ವಿಚಾರವಾಗಿದೆ. ಅಶಕ್ತರಿಗಾಗಿ ಸ್ಥಾಪನೆಗೊಂಡ ಫೌಂಡೇಶನ್ ಸಮಾಜದ ಬಡ ಬಗ್ಗರ ಪಾಲಿನ ಕಲ್ಪತರು ಆಗಲಿ ಎಂದರು.
ಮಂಗಳೂರು ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಮಾತನಾಡಿ, ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ಸಿಕ್ಕಾಗ ಯೋಜನೆಯ ಉದ್ಧೇಶ ಪೂರ್ಣಗೊಳ್ಳುತ್ತದೆ. ಯೋಜನೆಯ ಫಲಾನುಭವಿಗಳಿಗೆ ಸಹಾಯವಾಗುವ ದೃಷ್ಟಿಯಿಂದ ಕಲ್ಪತರು ಫೌಂಡೇಶನ್ ಕಾರ್ಯ ನಿರ್ವಹಿಸುವ ಮೂಲಕ ಇತರರಿಗೂ ಮಾದರಿಯಾಗುತ್ತದೆ ಎಂದು ಹೇಳಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ವಿ.ಎಚ್.ಪಿ ಮುಖಂಡರಾದ ಭುಜಂಗ ಕುಲಾಲ್ ಅದ್ಯಪಾಡಿ, ನವೀನ್ ಮೂಡುಶೆಡ್ಡೆ, ವಿ.ಜೆ ಮಧುರಾಜ್, ಸುಜಿತ್ ಉಪಸ್ಥಿತರಿದ್ದರು.
ಬಿಜೆಪಿ ಮುಖಂಡರು ಹಾಗೂ ಕಲ್ಪತರು ಫೌಂಡೇಶನ್ ಸ್ಥಾಪಕ ಸಾಕ್ಷಾತ್ ಶೆಟ್ಟಿ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಧನುಷ್ ರಾಜ್ ಪಚ್ಚನಾಡಿ ಸ್ವಾಗತಿಸಿ, ಪೃಥ್ವಿರಾಜ್ ಶೆಟ್ಟಿ ವಂದಿಸಿದರು. ವಿಶ್ವ ಕಜೆ ಕಾರ್ಯಕ್ರಮ ನಿರೂಪಿಸಿದರು.